ನೆಲಮಂಗಲ: ಬೆಂಗಳೂರು ಹೊರವಲಯದ ನೆಲಮಂಗಲ–ಹಾಸನ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟುವ ವೇಳೆ ಕಾರು ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಐದು ವರ್ಷದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಕಳೆದ ಒಂದು ತಿಂಗಳಿನಿಂದ ಕೋಮಾದಲ್ಲಿದ್ದ ಬಾಲಕಿ ಬುಧವಾರ ಕೊನೆಯುಸಿರೆಳೆದಿದ್ದು, ಕುಟುಂಬದಲ್ಲಿ ಶೋಕ ಆವರಿಸಿದೆ.
ನೆಲಮಂಗಲ ತಾಲೂಕಿನ ಶಾಂತಿನಗರ ಗ್ರಾಮದ ಬಳಿ ಕಳೆದ ತಿಂಗಳು 26ರಂದು ಈ ಅಪಘಾತ ಸಂಭವಿಸಿತ್ತು. ಸುಮಿತ್ರ ಹಾಗೂ ಮಂಜುನಾಥ್ ದಂಪತಿಯ ಪುತ್ರಿ ದೀಪ್ತಿ (5) ಪೋಷಕರೊಂದಿಗೆ ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದಿತ್ತು. ಅಂಗನವಾಡಿಯಲ್ಲಿ ಓದುತ್ತಿದ್ದ ಬಾಲಕಿ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಕೋಮಾ ಸ್ಥಿತಿಗೆ ತಲುಪಿದ್ದಳು.
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ನೀಡಿದ ಪೋಷಕರು
ಅಪಘಾತದ ಬಳಿಕ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಮಗಳನ್ನು ಬದುಕಿಸಿಕೊಳ್ಳಲು ಪೋಷಕರು ಕಳೆದ ಒಂದು ತಿಂಗಳಿನಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬಾಲಕಿ ಮೃತಪಟ್ಟಿದ್ದಾಳೆ. ಮುದ್ದಾದ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಸ್ಕೈವಾಕ್ ಅಥವಾ ಸರ್ವೀಸ್ ರಸ್ತೆ ನಿರ್ಮಿಸಲು ಆಗ್ರಹ
ಶಾಂತಿನಗರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ದಾಟುವ ವೇಳೆ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ರಸ್ತೆ ದಾಟುವಾಗ ಜೀವ ಭಯ ಎದುರಿಸುತ್ತಿರುವ ಗ್ರಾಮಸ್ಥರು, ಈ ಭಾಗದಲ್ಲಿ ಕೂಡಲೇ ಸ್ಕೈವಾಕ್ ಅಥವಾ ಸರ್ವೀಸ್ ರಸ್ತೆ ನಿರ್ಮಿಸಬೇಕು ಎಂದು ಆಗ್ರಹಿಸಿದ್ದಾರೆ.
ಬಾಲಕಿಯ ಸಾವಿನ ಬಳಿಕ ಸ್ಥಳೀಯರ ಬೇಡಿಕೆ ಮತ್ತಷ್ಟು ತೀವ್ರಗೊಂಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಘಟನೆ ಸಂಬಂಧ ನೆಲಮಂಗಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.








