ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ರಾಜ್ಯ ಸರ್ಕಾರಿ ನೌಕರರಿಗೆ 15 ದಿನಗಳ ಪಿತೃತ್ವ ರಜೆ ಘೋಷಿಸಿದ್ದಾರೆ. ಈ ಮೂಲಕ ತಮಿಳುನಾಡಿನಲ್ಲಿ ಪುರುಷ ಸರ್ಕಾರಿ ನೌಕರರಿಗೆ ಮೊದಲ ಬಾರಿಗೆ ಪಿತೃತ್ವ ರಜೆ ಸೌಲಭ್ಯ ಜಾರಿಗೆ ಬಂದಿದೆ.
ಹೊಸ ನಿಯಮದ ಪ್ರಕಾರ, ವಿವಾಹಿತ ಪುರುಷ ಸರ್ಕಾರಿ ನೌಕರರು ಮಗುವಿನ ಜನನದ ನಿರೀಕ್ಷಿತ ದಿನಾಂಕಕ್ಕೆ 15 ದಿನಗಳ ಮೊದಲು ಅಥವಾ ಮಗು ಜನಿಸಿದ ಆರು ತಿಂಗಳೊಳಗೆ 15 ದಿನಗಳ ರಜೆ ಪಡೆಯಬಹುದಾಗಿದೆ. ಈ ಕುರಿತು ರಾಜ್ಯ ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಮಗುವಿನ ಜನನದ ಸಂದರ್ಭದಲ್ಲಿ ತಾಯಿ ಮತ್ತು ನವಜಾತ ಶಿಶುವಿಗೆ ಅಗತ್ಯವಾದ ಆರೈಕೆ ಹಾಗೂ ಬೆಂಬಲ ದೊರೆಯುವುದು ಮುಖ್ಯವಾಗಿದೆ ಎಂದು ರಾಜ್ಯ ಸರ್ಕಾರ ಅಭಿಪ್ರಾಯಪಟ್ಟಿದೆ. ಈ ಅವಧಿಯಲ್ಲಿ ತಾಯಿಗೆ ದೈಹಿಕ ಮತ್ತು ಭಾವನಾತ್ಮಕ ಬೆಂಬಲ ನೀಡುವುದರ ಜೊತೆಗೆ ಮಗುವಿನ ಆರೈಕೆಯಲ್ಲೂ ತಂದೆಯ ಪಾತ್ರ ಮಹತ್ವದ್ದಾಗಿದೆ ಎಂದು ಸರ್ಕಾರ ಹೇಳಿದೆ.
ತಮಿಳುನಾಡಿನಲ್ಲಿ ಮಹಿಳಾ ಸರ್ಕಾರಿ ನೌಕರರಿಗೆ ಈಗಾಗಲೇ 365 ದಿನಗಳ ಹೆರಿಗೆ ರಜೆ ಸೌಲಭ್ಯ ನೀಡಲಾಗುತ್ತಿದೆ. ಆದರೆ, ಪುರುಷ ಸರ್ಕಾರಿ ನೌಕರರೂ ಪಿತೃತ್ವ ರಜೆ ಸೌಲಭ್ಯ ನೀಡುವಂತೆ ಹಲವು ದಿನಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದರು. ನೌಕರರ ಈ ಬೇಡಿಕೆಯನ್ನು ಪರಿಗಣಿಸಿರುವ ರಾಜ್ಯ ಸರ್ಕಾರ ಇದೀಗ 15 ದಿನಗಳ ಪಿತೃತ್ವ ರಜೆ ಮಂಜೂರು ಮಾಡಿ ಅಧಿಕೃತ ಆದೇಶ ಹೊರಡಿಸಿದೆ.
ಈ ಹೊಸ ಸೌಲಭ್ಯದಿಂದ ಮಗುವಿನ ಜನನದ ಸಂದರ್ಭದಲ್ಲಿ ತಂದೆಯರು ಕುಟುಂಬದೊಂದಿಗೆ ಸಮಯ ಕಳೆಯಲು ಹಾಗೂ ತಾಯಿ ಮತ್ತು ನವಜಾತ ಶಿಶುವಿನ ಆರೈಕೆಯಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆಯಲಿದೆ.







