ಬಳ್ಳಾರಿ/ದಾವಣಗೆರೆ: ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ತೆರೆಗೆ ಬರುತ್ತಿದ್ದಂತೆ ಬಳ್ಳಾರಿ ಮತ್ತು ದಾವಣಗೆರೆಯಲ್ಲಿ ಅಭಿಮಾನಿಗಳ ಸಂಭ್ರಮಕ್ಕೆ ಥಿಯೇಟರ್‌ಗಳೇ ಸಾಕ್ಷಿಯಾಗಿವೆ. ಬೆಳಗ್ಗೆ 6 ಗಂಟೆಯ ಶೋಗೆ ಮುನ್ನವೇ ಚಿತ್ರಮಂದಿರಗಳತ್ತ ಹರಿದುಬಂದ ಸಾವಿರಾರು ಅಭಿಮಾನಿಗಳು ಪಟಾಕಿ, ಡೋಲು, ಘೋಷಣೆ ಹಾಗೂ ಹೂಮಳೆಯೊಂದಿಗೆ ರಾಕಿಂಗ್ ಸ್ಟಾರ್‌ಗೆ ಅದ್ಧೂರಿ ಸ್ವಾಗತ ನೀಡಿದ್ದಾರೆ.
ಬಳ್ಳಾರಿಯಲ್ಲಿ ನಗರದ ಮೂರು ಚಿತ್ರಮಂದಿರಗಳಲ್ಲಿ ಮುಂಜಾನೆ 6 ಗಂಟೆಯಿಂದ ‘ಟಾಕ್ಸಿಕ್’ ಶೋ ಆರಂಭವಾಗಿದೆ. ಶಿವ-ಗಂಗಾ ಮತ್ತು ನಟರಾಜ್ ಚಿತ್ರಮಂದಿರಗಳ ಬಳಿ ಬೆಳಗ್ಗಿನಿಂದಲೇ ಅಭಿಮಾನಿಗಳ ದಂಡು ಸೇರಿದ್ದು, ಚಿತ್ರಮಂದಿರಗಳ ಆವರಣ ಕಿಕ್ಕಿರಿದು ತುಂಬಿತ್ತು.
ಯಶ್ ಅವರ ಪೋಸ್ಟರ್‌ಗಳನ್ನು ಹಿಡಿದು ಜೈಕಾರ ಹಾಕಿದ ಫ್ಯಾನ್ಸ್, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಸಿನಿಮಾ ಆರಂಭವಾಗಿ ಯಶ್ ತೆರೆ ಮೇಲೆ ಕಾಣಿಸಿಕೊಂಡ ಕ್ಷಣವೇ ಅಭಿಮಾನಿಗಳ ಉತ್ಸಾಹ ಮತ್ತಷ್ಟು ಹೆಚ್ಚಿದ್ದು, ಸ್ಕ್ರೀನ್ ಎದುರು ಚಪ್ಪಾಳೆ, ಜೈಕಾರ ಮತ್ತು ಹರ್ಷೋದ್ಗಾರ ಮೊಳಗಿದೆ.
ದಾವಣಗೆರೆಯಲ್ಲೂ ಇದೇ ರೀತಿಯ ಅಭಿಮಾನಿಗಳ ಕ್ರೇಜ್ ಕಂಡುಬಂದಿದೆ. ನಗರದ ಮೂರು ಚಿತ್ರಮಂದಿರಗಳು ಹಾಗೂ ಎಸ್‌ಎಸ್ ಮಾಲ್‌ನಲ್ಲಿ ‘ಟಾಕ್ಸಿಕ್’ ಬಿಡುಗಡೆಯಾಗಿದ್ದು, ತ್ರಿಶೂಲ್ ಮತ್ತು ತ್ರಿನೇತ್ರ ಚಿತ್ರಮಂದಿರಗಳ ಬಳಿ ಅಭಿಮಾನಿಗಳು ಭರ್ಜರಿ ಸೆಲೆಬ್ರೇಷನ್ ನಡೆಸಿದ್ದಾರೆ.
ನಾಸಿಕ್ ಡೋಲ್‌ಗಳ ಸದ್ದಿಗೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದು, ಪಟಾಕಿ ಸಿಡಿಸಿ ಸಿನಿಮಾ ಬಿಡುಗಡೆಯನ್ನು ಸಂಭ್ರಮಿಸಿದ್ದಾರೆ. ಸಾವಿರಾರು ಅಭಿಮಾನಿಗಳು ಸ್ಕ್ರೀನ್ ಬಳಿ ಜಮಾಯಿಸಿ ಯಶ್ ಎಂಟ್ರಿಗೆ ಹೂಮಳೆ ಸುರಿಸಿದ್ದಾರೆ.
ಇಷ್ಟೇ ಅಲ್ಲದೆ, ಕುಂಬಳಕಾಯಿ ಹಿಡಿದು ಆರತಿ ಬೆಳಗಿದ ಅಭಿಮಾನಿಗಳು ‘ಜೈ ಯಶ್’, ‘ಜೈ ರಾಕಿಂಗ್ ಸ್ಟಾರ್’ ಘೋಷಣೆಗಳೊಂದಿಗೆ ತಮ್ಮ ನೆಚ್ಚಿನ ನಟನಿಗೆ ಭರ್ಜರಿ ಸ್ವಾಗತ ನೀಡಿದ್ದಾರೆ.



