ಲಕ್ನೋ/ಬೆಂಗಳೂರು: ಲಕ್ನೋದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಬಾಂಬ್ ಬೆದರಿಕೆ ಪತ್ರವೊಂದು ಪತ್ತೆಯಾಗಿದ್ದು, ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಹಾಗೂ ಇತರ ಭದ್ರತಾ ಏಜೆನ್ಸಿಗಳು ತಕ್ಷಣವೇ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿವೆ ಎಂದು ಮೂಲಗಳು ತಿಳಿಸಿವೆ.
ಇಂಡಿಗೋ ವಿಮಾನ (ಸಂಖ್ಯೆ 6E231)ದಲ್ಲಿ ಈ ಘಟನೆ ನಡೆದಿದ್ದು, ಬುಧವಾರ ಇಂದು ಬೆಂಗಳೂರಿಗೆ ಬಂದು ಸುರಕ್ಷಿತವಾಗಿ ಲ್ಯಾಂಡ್ ಆದ ಬಳಿಕ ಬೆದರಿಕೆ ಪತ್ರ ಪತ್ತೆಯಾಗಿದೆ. ಟಿಶ್ಯೂ ಪೇಪರ್ನಲ್ಲಿ ಬಾಂಬ್ ಬೆದರಿಕೆ ಬರೆಯಲಾಗಿದ್ದು, ವಿಮಾನ ಪ್ರಯಾಣದ ಕೊನೆಯ ಹಂತದಲ್ಲಿ ಈ ಪತ್ರ ಪತ್ತೆಯಾಗಿದೆ ಎನ್ನಲಾಗಿದೆ.
ಬೆದರಿಕೆ ಪತ್ರ ಪತ್ತೆಯಾದ ಬೆನ್ನಲ್ಲೇ ಭದ್ರತಾ ಏಜೆನ್ಸಿಗಳು ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನವನ್ನು ಸಂಪೂರ್ಣವಾಗಿ ಪರಿಶೀಲಿಸಲು ಮುಂದಾಗಿವೆ. ಬೆದರಿಕೆ ನಿಜವಾಗಿದೆಯೇ ಅಥವಾ ಹುಸಿ ಬೆದರಿಕೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತಪಾಸಣೆ ನಡೆಸಲಾಗುತ್ತಿದೆ. ಬೆದರಿಕೆ ಪತ್ರವನ್ನು ಯಾರು ಬರೆದಿದ್ದಾರೆ ಮತ್ತು ಅದು ವಿಮಾನದಲ್ಲಿ ಹೇಗೆ ಪತ್ತೆಯಾಯಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ತನಿಖೆ ಮುಂದುವರಿಸಿದ್ದು, ಹೆಚ್ಚಿನ ವಿವರಗಳಿಗಾಗಿ ಕಾಯಲಾಗುತ್ತಿದೆ.



