HomeGadag Newsಅನೈತಿಕ ಸಂಬಂಧದ ಶಂಕೆ! ಯುವಕನ ಮನೆಗೆ ನುಗ್ಗಿ ಬಡಿಗೆ-ಕಟ್ಟಿಗೆಯಿಂದ ಥಳಿಸಿ ಭೀಕರ ಕೊಲೆ, ಮಹಿಳೆ ಸೇರಿ...

ಅನೈತಿಕ ಸಂಬಂಧದ ಶಂಕೆ! ಯುವಕನ ಮನೆಗೆ ನುಗ್ಗಿ ಬಡಿಗೆ-ಕಟ್ಟಿಗೆಯಿಂದ ಥಳಿಸಿ ಭೀಕರ ಕೊಲೆ, ಮಹಿಳೆ ಸೇರಿ ನಾಲ್ವರು ಅರೆಸ್ಟ್!

 ಲಕ್ಷ್ಮೇಶ್ವರ:- ಅನೈತಿಕ ಸಂಬಂಧದ ಶಂಕೆಯಿಂದ ಹುಟ್ಟಿಕೊಂಡ ದ್ವೇಷ ಯುವಕನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಲ್ಲಿ ಜರುಗಿದೆ.

ಎಸ್, ತಾಲೂಕಿನ ಪುಟಂಗಾವ್ ಬಡ್ನಿ ಗ್ರಾಮದಲ್ಲಿ ಯುವಕನ ಮನೆಯ ಅಂಗಳದಲ್ಲೇ ಬಡಿಗೆ ಹಾಗೂ ಕಟ್ಟಿಗೆ ಮಣೆಯಿಂದ ಭೀಕರವಾಗಿ ಥಳಿಸಿ ಆರೋಪಿಗಳು ಕೊಲೆಗೈದಿದ್ದಾರೆ. ಈರಣ್ಣ ಷಣ್ಮುಖಪ್ಪ ಅಗಸಿಬಾಗಿಲು(34) ಕೊಲೆಯಾದ ಯುವಕ. ಈತ ವೃತ್ತಿಯಲ್ಲಿ ಕುರಿಕಾಯುತ್ತಿದ್ದ ಎನ್ನಲಾಗಿದೆ.

ಮೃತ ಈರಣ್ಣ ಹಾಗೂ ಗ್ರಾಮದ ರೇಣುಕಾ ನಡುವೆ ಅನೈತಿಕ ಸಂಬಂಧವಿದೆ ಎಂಬ ಶಂಕೆಯೇ ಈ ಹತ್ಯೆಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವಿಷಯವಾಗಿ ಈ ಹಿಂದೆ ಹಲವು ಬಾರಿ ಜಗಳ ನಡೆದಿದ್ದು, ಸುಮಾರು ಎರಡು ವರ್ಷಗಳ ಹಿಂದೆ ಗ್ರಾಮದ ಹಿರಿಯರು ಮಧ್ಯಪ್ರವೇಶಿಸಿ ರಾಜೀ ಮಾಡಿಸಿದ್ದರು ಎನ್ನಲಾಗಿದೆ. ಆದರೆ, ಸಂಶಯ ಮತ್ತು ದ್ವೇಷ ಮಾತ್ರ ಕೊನೆಗೊಂಡಿರಲಿಲ್ಲ ಎಂಬುದು ಈ ಕೊಲೆ ಪ್ರಕರಣದಿಂದ ಬೆಳಕಿಗೆ ಬಂದಿದೆ.

ಮನೆಯೊಳಗೆ ನುಗ್ಗಿ ಮಾರಣಾಂತಿಕ ಹಲ್ಲೆ:

ಬುಧವಾರ ರಾತ್ರಿ ಸುಮಾರು 8.30ರ ವೇಳೆಗೆ ಆರೋಪಿಗಳು ಈರಣ್ಣನ ಮನೆಗೆ ತೆರಳಿ ಜಗಳ ಆರಂಭಿಸಿದ್ದಾರೆ ಎನ್ನಲಾಗಿದೆ. ಮನೆಯ ಅಂಗಳದ ಹೊಸ್ತಿಲಲ್ಲಿ ಕುಳಿತಿದ್ದ ಈರಣ್ಣನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪಿಗಳು, ಬಡಿಗೆ ಹಾಗೂ ಮನೆಯಲ್ಲಿದ್ದ ಕಟ್ಟಿಗೆ ಮಣೆಯಿಂದ ತಲೆಗೆ ತೀವ್ರವಾಗಿ ಹೊಡೆದಿದ್ದಾರೆ. ಬಳಿಕ ಕಾಲಿನಿಂದ ಒದ್ದು ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ತೀವ್ರ ರಕ್ತಗಾಯಗೊಂಡ ಈರಣ್ಣ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ರೇಣುಕಾ, ಪತಿ, ತಾಯಿ ಮತ್ತು ಸಹೋದರನ ಬಂಧನ:

ಪ್ರಕರಣಕ್ಕೆ ಸಂಬಂಧಿಸಿದಂತೆ ಹನಮವ್ವ ಕೋಂ ಮುದಿಯಪ್ಪ ಭೋವಿ (40), ಧರ್ಮರಾಜ ತಂದೆ ಮುದಿಯಪ್ಪ ಭೋವಿ (24), ರೇಣುಕಾ ಕೋಂ ಆಂಜನೇಯ ಕಳಸಾಪುರ (22) ಹಾಗೂ ಆಂಜನೇಯ ತಂದೆ ಸೋಮಣ್ಣ ಕಳಸಾಪುರ (32) ಅವರನ್ನು ಪೊಲೀಸರು ಬಂಧಿಸಿದ್ದಾರೆ.

ರೇಣುಕಾ, ಆಕೆಯ ಪತಿ ಆಂಜನೇಯ, ತಾಯಿ ಹನಮವ್ವ ಹಾಗೂ ಸಹೋದರ ಧರ್ಮರಾಜ ಸೇರಿ ಈರಣ್ಣನನ್ನು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮೃತ ಈರಣ್ಣನ ಸಹೋದರ ಸಂತೋಷ್ ಷಣ್ಮುಖಪ್ಪ ಅಗಸಿಬಾಗಿಲು ನೀಡಿದ ದೂರಿನ ಮೇರೆಗೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 159/2026 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ಈ ಪ್ರಕರಣದಲ್ಲಿ ಆರಂಭದಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿದ್ದರೂ, ಸದ್ಯ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದ ಸಂಪೂರ್ಣ ಹಿನ್ನೆಲೆ ಹಾಗೂ ಇತರ ಆರೋಪಿಗಳ ಪಾತ್ರದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img