ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಇತರೆ ಆರೋಪಿಗಳಿಗೆ ಮತ್ತೊಂದು ಕಾನೂನು ಸವಾಲು ಎದುರಾಗಿದೆ. ಪ್ರಕರಣದ ಎ14 ಆರೋಪಿ ಪ್ರದೋಷ್ ಎಸ್. ರಾವ್ ಪ್ರಾಸಿಕ್ಯೂಷನ್ ಪರ ಸರ್ಕಾರಿ ಸಾಕ್ಷಿಯಾಗಲು ಮುಂದಾಗಿರುವುದು ತನಿಖೆ ಹಾಗೂ ವಿಚಾರಣೆಯ ದೃಷ್ಟಿಯಿಂದ ಮಹತ್ವದ ಬೆಳವಣಿಗೆಯಾಗಿದೆ.
ಘಟನೆ ನಡೆದ ಸಂದರ್ಭದಿಂದ ಹಿಡಿದು ಆರೋಪಿಗಳ ಪಾತ್ರ ಮತ್ತು ಹತ್ಯೆಯ ಬಳಿಕ ನಡೆದ ಬೆಳವಣಿಗೆಗಳವರೆಗೆ ಪ್ರದೋಷ್ ಅವರಿಗೆ ತಿಳಿದಿರುವ ಮಾಹಿತಿಯು ಪ್ರಕರಣಕ್ಕೆ ನಿರ್ಣಾಯಕವಾಗುವ ಸಾಧ್ಯತೆ ಇದೆ. ಪೊಲೀಸರು ಸಂಗ್ರಹಿಸಿರುವ ಸಾಂದರ್ಭಿಕ ಸಾಕ್ಷ್ಯಗಳ ನಡುವೆ ಪ್ರದೋಷ್ ಅವರ ಹೇಳಿಕೆ ಮತ್ತೊಂದು ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸಬಹುದು ಎನ್ನಲಾಗಿದೆ.
ಕಾನೂನಿನ ಪ್ರಕಾರ, ಪ್ರಕರಣದಲ್ಲಿ ಸಹ ಆರೋಪಿಯಾಗಿರುವ ವ್ಯಕ್ತಿ ಸಂಪೂರ್ಣ ಹಾಗೂ ಸತ್ಯವಾದ ಮಾಹಿತಿಯನ್ನು ಬಹಿರಂಗಪಡಿಸಿ ಪ್ರಾಸಿಕ್ಯೂಷನ್‌ಗೆ ಸಹಕರಿಸಲು ಮುಂದಾದರೆ, ನ್ಯಾಯಾಲಯದ ಅನುಮತಿಯೊಂದಿಗೆ ಅವರನ್ನು Approver ಆಗಿ ಪರಿಗಣಿಸಬಹುದು. ಇದಕ್ಕಾಗಿ ಕ್ಷಮಾದಾನ ನೀಡುವ ವ್ಯವಸ್ಥೆಯೂ ಇದೆ.
ಆದರೆ ಇದು ಆರೋಪಿಯಿಂದ ಸಂಪೂರ್ಣ ಮುಕ್ತಿಯ ಸರಳ ಮಾರ್ಗವಲ್ಲ. ಕ್ಷಮಾದಾನದ ಷರತ್ತುಗಳನ್ನು ಉಲ್ಲಂಘಿಸಿ ಸುಳ್ಳು ಮಾಹಿತಿ ಅಥವಾ ಸುಳ್ಳು ಸಾಕ್ಷ್ಯ ನೀಡಿದರೆ, ಕ್ಷಮಾದಾನ ರದ್ದಾಗುವ ಜೊತೆಗೆ ಆ ವ್ಯಕ್ತಿಯ ವಿರುದ್ಧವೇ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ಹಿರಿಯ ವಕೀಲರ ವಿವರಣೆಯಂತೆ, ಪ್ರಕರಣದಲ್ಲಿ ಸಣ್ಣ ಅಥವಾ ಸೀಮಿತ ಪಾತ್ರ ಹೊಂದಿರುವ ಸಹ ಆರೋಪಿ ಸರ್ಕಾರಿ ಸಾಕ್ಷಿಯಾಗುವುದರಿಂದ, ಆತನ ಹೇಳಿಕೆ ಇತರ ಸಾಕ್ಷ್ಯಗಳಿಗೆ ಪೂರಕವಾಗಬಹುದು. ವಿಶೇಷವಾಗಿ ನೇರ ಸಾಕ್ಷ್ಯಗಳ ಕೊರತೆಯಿರುವ ಪ್ರಕರಣಗಳಲ್ಲಿ ಇಂತಹ ಸಾಕ್ಷ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಗುವ ಸಾಧ್ಯತೆ ಇದೆ.
ಹೀಗಾಗಿ ಪ್ರದೋಷ್ ಅವರ ಹೇಳಿಕೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮುಂದಿನ ಕಾನೂನು ಪ್ರಕ್ರಿಯೆಗೆ ಯಾವ ರೀತಿಯ ತಿರುವು ನೀಡಲಿದೆ ಎಂಬುದು ಇದೀಗ ಕುತೂಹಲಕ್ಕೆ ಕಾರಣವಾಗಿದೆ.



