HomeKarnataka News'ಹೇಳಿ ಹೋಗು ಕಾರಣ' ನಕಲಿ ಪ್ರತಿ ಮಾರಾಟ ಪ್ರಕರಣ: ಸೆಕ್ಷನ್ 79 ರಕ್ಷಣೆ ಕೋರಿದ ಅಮೆಜಾನ್

‘ಹೇಳಿ ಹೋಗು ಕಾರಣ’ ನಕಲಿ ಪ್ರತಿ ಮಾರಾಟ ಪ್ರಕರಣ: ಸೆಕ್ಷನ್ 79 ರಕ್ಷಣೆ ಕೋರಿದ ಅಮೆಜಾನ್

For Dai;y Updates Join Our whatsapp Group

ಬೆಂಗಳೂರು: ದಿವಂಗತ ಪತ್ರಕರ್ತ ರವಿ ಬೆಳಗೆರೆ ಅವರ ‘ಹೇಳಿ ಹೋಗು ಕಾರಣ’ ಕಾದಂಬರಿಯ ನಕಲಿ ಪ್ರತಿಗಳ ಮಾರಾಟ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ಮಧ್ಯವರ್ತಿಯಾಗಿರುವ ಅಮೆಜಾನ್ ಕಂಪೆನಿ ಮಾಹಿತಿ ತಂತ್ರಜ್ಞಾನ ಕಾಯ್ದೆ-2000ರ ಸೆಕ್ಷನ್ 79ರಡಿ ರಕ್ಷಣೆ ಒದಗಿಸಬೇಕು ಎಂದು ಹೈಕೋರ್ಟ್‌ಗೆ ಮನವಿ ಮಾಡಿದೆ.

ಇ-ಕಾಮರ್ಸ್ ವೇದಿಕೆಗಳಲ್ಲಿ ನಕಲಿ ಪುಸ್ತಕಗಳ ಮಾರಾಟಕ್ಕೆ ಸಂಬಂಧಿಸಿದಂತೆ ಪುಸ್ತಕದ ಹಕ್ಕುಸ್ವಾಮ್ಯ ಹೊಂದಿರುವ ಭಾವನಾ ಬೆಳಗೆರೆ ದಾಖಲಿಸಿರುವ ಪ್ರಕರಣ ರದ್ದು ಕೋರಿ ಅಮೆಜಾನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠಕ್ಕೆ ಅಮೆಜಾನ್ ಈ ಮಾಹಿತಿ ನೀಡಿದೆ.

ವಿಚಾರಣೆ ವೇಳೆ ಅಮೆಜಾನ್ ಪರ ವಕೀಲರು, ಅರ್ಜಿದಾರ ಕಂಪನಿ ಕೇವಲ ಮಾರಾಟಗಾರರು ಮತ್ತು ಖರೀದಿದಾರರನ್ನು ಸಂಪರ್ಕಿಸುವ ಒಂದು ವೇದಿಕೆಯನ್ನಷ್ಟೇ ಒದಗಿಸುತ್ತದೆ ಎಂದೂ, ಮೂರನೇ ವ್ಯಕ್ತಿಯ ಮಾರಾಟಗಾರರು ಎಸಗುವ ಹಕ್ಕುಸ್ವಾಮ್ಯ ಉಲ್ಲಂಘನೆಗೆ ಕಂಪನಿಯನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದೂ ವಾದಿಸಿದರು. ತಮ್ಮ ವೇದಿಕೆಯಲ್ಲಿ ಕಾರ್ಯಾಚರಣೆ ನಡೆಸುವ ಮಾರಾಟಗಾರರ ವಿಚಾರದಲ್ಲಿ ಕಂಪನಿ ಅಗತ್ಯ ನಿಗಾ ಮತ್ತು ತನಿಖಾ ಕ್ರಮಗಳನ್ನು ಪಾಲಿಸಿದೆ ಎಂದು ಸ್ಪಷ್ಟಪಡಿಸಿದರು.

ಇನ್ವೆಂಟರಿ ಆಧಾರಿತ ಮಾದರಿಯಲ್ಲಿ ಕಂಪನಿಗಳೇ ಖುದ್ದಾಗಿ ಉತ್ಪನ್ನ ಖರೀದಿಸಿ, ಸಂಗ್ರಹಿಸಿ, ಬೆಲೆ ನಿಗದಿಪಡಿಸಿ ಮಾರಾಟ ಮಾಡುತ್ತವೆ, ಆದರೆ ಅಮೆಜಾನ್ ಅಂತಹ ಮಾದರಿ ಹೊಂದಿಲ್ಲದೆ ಕೇವಲ ಮೂರನೇ ವ್ಯಕ್ತಿಯ ಮಾರಾಟಗಾರರಿಗೆ ಮುಕ್ತ ಮಾರುಕಟ್ಟೆ ವೇದಿಕೆಯನ್ನಷ್ಟೇ ಕಲ್ಪಿಸುತ್ತದೆ ಎಂದ ವಕೀಲರು, ಈ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79(2) ಮತ್ತು (3)ರ ಪ್ರಕಾರ ಮಧ್ಯವರ್ತಿಯಾಗಿರುವ ಕಂಪನಿ ನಾಗರಿಕ ಅಥವಾ ಕ್ರಿಮಿನಲ್ ಹೊಣೆಗಾರಿಕೆಯಿಂದ ವಿನಾಯಿತಿ ಪಡೆಯಲು ಅರ್ಹವಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ಸೆಕ್ಷನ್ 79(3)(b) ಅಡಿ ನ್ಯಾಯಾಲಯದಿಂದ ಆದೇಶ ಬರುವುದಕ್ಕೂ ಮುನ್ನ ದೂರು ಬಂದ ತಕ್ಷಣವೇ ಅಮೆಜಾನ್ ಸ್ವಯಂಪ್ರೇರಿತವಾಗಿ ಎಲ್ಲಾ 12 ಮಾರಾಟಗಾರರ ಉತ್ಪನ್ನಗಳ ಪಟ್ಟಿಯನ್ನು ತೆಗೆದುಹಾಕಿದ್ದು, ತನಿಖಾಧಿಕಾರಿಗೆ ಸಂಬಂಧಪಟ್ಟ ಮಾರಾಟಗಾರರ ಸಂಪೂರ್ಣ ವಿವರಗಳನ್ನೂ ಒದಗಿಸಲಾಗಿದೆ ಎಂದು ವಿವರಿಸಿದರು. ವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು.

ಪ್ರಕರಣದ ಹಿನ್ನೆಲೆ: ದಿವಂಗತ ಪತ್ರಕರ್ತ ರವಿ ಬೆಳಗೆರೆ ಅವರ ‘ಹೇಳಿ ಹೋಗು ಕಾರಣ’ ಕಾದಂಬರಿಯ ಹಕ್ಕುಸ್ವಾಮ್ಯ ಹೊಂದಿರುವ ಭಾವನಾ ಬೆಳಗೆರೆ ನೀಡಿದ ದೂರಿನ ಮೇರೆಗೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಕೃತಿಸ್ವಾಮ್ಯ ಕಾಯ್ದೆ-1957ರ ಸೆಕ್ಷನ್ 51(1)(b) ಮತ್ತು 63ರಡಿ ದಾಖಲಾಗಿರುವ ಈ ಪ್ರಕರಣದ ಮುಂದಿನ ವಿಚಾರಣೆ ಹಾಗೂ ಪ್ರಕ್ರಿಯೆಗಳಿಗೆ ಮೇ 19ರಂದು ಹೈಕೋರ್ಟ್ ತಡೆ ನೀಡಿತ್ತು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img