ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೃಷ್ಣರಾಜ ಸಾಗರ ಜಲಾಶಯಕ್ಕೆ ಹರಿದುಬರುತ್ತಿರುವ ನೀರಿನ ಒಳಹರಿವಿನಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.
ಕಳೆದ ಕೆಲವು ದಿನಗಳಿಂದ ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದರಿಂದ ಕೆಆರ್ಎಸ್ ಡ್ಯಾಂಗೆ ಒಳಹರಿವು ಹೆಚ್ಚಾಗಿತ್ತು. ನಿನ್ನೆ 17,427 ಕ್ಯೂಸೆಕ್ ಇದ್ದ ಒಳಹರಿವು ಇದೀಗ 10,028 ಕ್ಯೂಸೆಕ್ಗೆ ಇಳಿಕೆಯಾಗಿದೆ.
ಈ ವಾರದ ಆರಂಭದಲ್ಲಿ ಕೊಡಗು ಭಾಗದಲ್ಲಿ ಭಾರೀ ಮಳೆಯಾಗಿದ್ದ ಪರಿಣಾಮ ಕೆಆರ್ಎಸ್ಗೆ ನೀರಿನ ಹರಿವು ಹೆಚ್ಚಾಗಿತ್ತು. ಬುಧವಾರ ಬೆಳಗ್ಗೆ 9,438 ಕ್ಯೂಸೆಕ್ ಇದ್ದ ಒಳಹರಿವು, ನಿರಂತರ ಮಳೆಯ ಹಿನ್ನೆಲೆಯಲ್ಲಿ ಗುರುವಾರ 17,427 ಕ್ಯೂಸೆಕ್ಗೆ ಏರಿಕೆಯಾಗಿತ್ತು. ಇದೀಗ ಮಳೆ ಪ್ರಮಾಣ ತಗ್ಗಿರುವುದರಿಂದ ಒಳಹರಿವು ಮತ್ತೆ ಇಳಿಕೆಯಾಗಿದೆ.
KRS ಡ್ಯಾಂನ ಇಂದಿನ ನೀರಿನ ಮಟ್ಟ:
- ಗರಿಷ್ಠ ನೀರಿನ ಮಟ್ಟ: 124.80 ಅಡಿ
- ಇಂದಿನ ನೀರಿನ ಮಟ್ಟ: 110.20 ಅಡಿ
- ಇಂದಿನ ಒಳಹರಿವು: 10,028 ಕ್ಯೂಸೆಕ್
- ಗರಿಷ್ಠ ಸಂಗ್ರಹ ಸಾಮರ್ಥ್ಯ: 49.452 ಟಿಎಂಸಿ
- ಪ್ರಸ್ತುತ ನೀರಿನ ಸಂಗ್ರಹ: 31.923 ಟಿಎಂಸಿ
ಒಳಹರಿವು ಕಡಿಮೆಯಾಗಿದ್ದರೂ ಜಲಾಶಯದಲ್ಲಿ ನೀರಿನ ಮಟ್ಟ 110 ಅಡಿ ದಾಟಿದೆ. ಹೀಗಾಗಿ ಸದ್ಯಕ್ಕೆ ರೈತರ ಕೃಷಿ ಚಟುವಟಿಕೆಗಳು ಹಾಗೂ ಕುಡಿಯುವ ನೀರಿನ ಅಗತ್ಯಗಳಿಗೆ ಜಲಾಶಯದಲ್ಲಿ ಸಾಕಷ್ಟು ನೀರು ಲಭ್ಯವಿದೆ.
ಮುಂದಿನ ದಿನಗಳಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಹೇಗಿರಲಿದೆ ಎಂಬುದರ ಮೇಲೆ ಕೆಆರ್ಎಸ್ ಡ್ಯಾಂನ ಒಳಹರಿವಿನ ಪ್ರಮಾಣವೂ ಅವಲಂಬಿತವಾಗಿರಲಿದೆ.



