ಗದಗ: ಜಿಲ್ಲೆಯಲ್ಲಿ ಸಂಘಟಿತ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಿ, ಸಮಾಜದ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ರೌಡಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಗದಗ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಐಪಿಎಸ್ ಅಧಿಕಾರಿ ಮಿಥುನ್ ಎಚ್.ಎನ್. ಎಚ್ಚರಿಸಿದರು.
ಭಾನುವಾರ ಗದಗ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ತಮ್ಮ ಪ್ರಮುಖ ಆದ್ಯತೆಯಾಗಿದ್ದು, ಅಪರಾಧ ಚಟುವಟಿಕೆಗಳನ್ನು ಹತ್ತಿಕ್ಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.
ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದವರಾದ ಮಿಥುನ್ ಎಚ್.ಎನ್. ಅವರು ದಾವಣಗೆರಿ ಜಿಲ್ಲೆಯಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ತಮ್ಮ ಪೊಲೀಸ್ ಸೇವೆ ಆರಂಭಿಸಿದ್ದರು. ಬಳಿಕ ಮಂಗಳೂರಿನಲ್ಲಿ ಸುಮಾರು ಒಂದೂವರೆ ವರ್ಷಗಳ ಕಾಲ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಗದಗ ಜಿಲ್ಲೆ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕವಾಗಿ ಶ್ರೀಮಂತ ಜಿಲ್ಲೆಯಾಗಿದೆ. ಜಿಲ್ಲೆಯ ವಾಸ್ತವ ಸ್ಥಿತಿ ಹಾಗೂ ಪೊಲೀಸ್ ವ್ಯವಸ್ಥೆಯ ಕಾರ್ಯವೈಖರಿಯನ್ನು ಅರಿಯುವ ಉದ್ದೇಶದಿಂದ ವಾರದ ಅವಧಿಯಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಆಯಾ ಪ್ರದೇಶಗಳ ಸಮಸ್ಯೆಗಳನ್ನು ಖುದ್ದಾಗಿ ಅರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಪರಿಣಾಮಕಾರಿ ಪೊಲೀಸ್ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಸಾಲುಸಾಲು ಹಬ್ಬಗಳು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಶಾಂತಿ ಹಾಗೂ ಸೌಹಾರ್ದತೆ ಕಾಪಾಡಲು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
500 ರೌಡಿ ಶೀಟರ್ಗಳ ಮೇಲೆ ನಿಗಾ:
ಜಿಲ್ಲೆಯಲ್ಲಿ ಸುಮಾರು 500 ರೌಡಿ ಶೀಟರ್ಗಳು ಇರುವ ಮಾಹಿತಿ ಲಭ್ಯವಾಗಿದೆ. ಸಮಾಜದ ಶಾಂತಿ ಕದಡುವ ಅಥವಾ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ರೌಡಿಗಳ ಮೇಲೆ ನಿರಂತರ ನಿಗಾ ವಹಿಸಲಾಗುವುದು. ಅಗತ್ಯವಿದ್ದಲ್ಲಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಎಚ್ಚರಿಸಿದರು.
ಜಿಲ್ಲೆಯಲ್ಲಿ ಗಾಂಜಾ ಸಾಗಾಟ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಪೊಲೀಸ್ ಇಲಾಖೆ ಬದ್ಧವಾಗಿದೆ. ಮಾದಕ ವಸ್ತುಗಳ ಜಾಲದ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಿ, ಮಾರಾಟ ಹಾಗೂ ಸಾಗಾಟದಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಆನ್ಲೈನ್ ವಂಚನೆ ಪ್ರಕರಣಗಳಲ್ಲಿ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಎಸ್ಪಿ ಮಿಥುನ್ ಎಚ್.ಎನ್. ಮನವಿ ಮಾಡಿದರು.
ಹಣ ಕಳೆದುಕೊಂಡ ತಕ್ಷಣವೇ 1930 ಸೈಬರ್ ಕ್ರೈಂ ಸಹಾಯವಾಣಿ ಸಂಖ್ಯೆಗೆ ದೂರು ನೀಡಬೇಕು. ವಂಚನೆಯಾದ ಬಳಿಕ ಆರಂಭಿಕ ಕೆಲವು ಗಂಟೆಗಳಲ್ಲಿಯೇ ದೂರು ನೀಡಿದರೆ ಹಣದ ವಹಿವಾಟನ್ನು ತಡೆಹಿಡಿಯುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಯಾವುದೇ ವಿಳಂಬ ಮಾಡದೆ ತಕ್ಷಣ ದೂರು ದಾಖಲಿಸುವಂತೆ ಅವರು ಸಾರ್ವಜನಿಕರಿಗೆ ಸಲಹೆ ನೀಡಿದರು.
ಜಿಲ್ಲೆಯಲ್ಲಿ ರಸ್ತೆ ಅಪಘಾತಗಳ ಪ್ರಮಾಣ ಕಡಿಮೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಅಪಘಾತಗಳಿಗೆ ಕಾರಣವಾಗುವ ಸ್ಥಳಗಳನ್ನು ಗುರುತಿಸಿ, ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ ರಸ್ತೆ ಸುರಕ್ಷತೆಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಪೊಲೀಸ್ ಇಲಾಖೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾರ್ವಜನಿಕರ ಸಹಕಾರ ಅತ್ಯಂತ ಅಗತ್ಯವಾಗಿದೆ. ಜನಸಾಮಾನ್ಯರು ತಮ್ಮ ಸಮಸ್ಯೆಗಳನ್ನು ಮುಕ್ತ ಮನಸ್ಸಿನಿಂದ ಪೊಲೀಸರೊಂದಿಗೆ ಹಂಚಿಕೊಳ್ಳಬಹುದು. ಸಾರ್ವಜನಿಕರು ನೀಡುವ ಮಾಹಿತಿಯ ಗೌಪ್ಯತೆಯನ್ನು ಕಾಪಾಡಲಾಗುವುದು ಎಂದು ಅವರು ಭರವಸೆ ನೀಡಿದರು.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ, ಶಾಂತಿ ಮತ್ತು ಸುರಕ್ಷತೆ ಕಾಪಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ಸಂಘಟಿತ ಅಪರಾಧ, ಮಾದಕ ವಸ್ತುಗಳ ಜಾಲ ಹಾಗೂ ಸಮಾಜದ ಶಾಂತಿಗೆ ಧಕ್ಕೆ ತರುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ತಮ್ಮ ಸಮಸ್ಯೆಗಳು ಹಾಗೂ ಮಾಹಿತಿಯನ್ನು ಮುಕ್ತವಾಗಿ ಪೊಲೀಸರೊಂದಿಗೆ ಹಂಚಿಕೊಳ್ಳಬೇಕು. ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಉತ್ತಮ ಕಾನೂನು ಸುವ್ಯವಸ್ಥೆ ಸಾಧ್ಯವಾಗುತ್ತದೆ” ಎಂದು ಎಸ್ಪಿ ಮಿಥುನ್ ಎಚ್.ಎನ್. ಹೇಳಿದರು.

