ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ನಗರಸಭೆಯ ವಾರ್ಡ್ ನಂ. 24ರ ನಾಲ್ವಾಡ ಓಣಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ಹಾಗೂ ಐತಿಹಾಸಿಕ ಪಂಚರ ಹೊಂಡ ಬಾವಿಯ ಸ್ವಚ್ಛತಾ ಮತ್ತು ಕುಡಿಯುವ ನೀರಿನ ಯೋಜನೆ ಕಾಮಗಾರಿಗಳಿಗೆ ಶಾಸಕ ಡಾ. ಎಚ್.ಕೆ. ಪಾಟೀಲ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಗರದ ಅಭಿವೃದ್ಧಿಗೆ ಈಗಾಗಲೇ ವಾರ್ಡ್ ನಂ. 24ರಲ್ಲಿ ಅತ್ಯಂತ ಅಗತ್ಯವಿರುವ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಗುಣಮಟ್ಟದ ಕಾಮಗಾರಿಗಳಿಗೆ ಆದ್ಯತೆ ನೀಡುವ ಮೂಲಕ ಸಾರ್ವಜನಿಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಮುಂಬರುವ ದಿನಗಳಲ್ಲಿ ಗದಗ-ಬೆಟಗೇರಿ ನಗರಕ್ಕೆ ಹೆಚ್ಚಿನ ಅನುದಾನ ತಂದು ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ವಾರ್ಡ್ ನಂ. 24ರಲ್ಲಿ ಸಿ.ಸಿ. ರಸ್ತೆ ನಿರ್ಮಾಣ, ಒಳಚರಂಡಿ ನಿರ್ಮಾಣ, ಬೋರ್‌ವೆಲ್ ಕೊರೆಸಿ ನೀರಿನ ಸೌಲಭ್ಯ ಕಲ್ಪಿಸುವುದು ಸೇರಿದಂತೆ ಒಟ್ಟು ₹1 ಕೋಟಿ ಮೊತ್ತದ ಬೃಹತ್ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಮೂರು ಬೋರ್‌ವೆಲ್‌ಗಳ ನಿರ್ಮಾಣ ಹಾಗೂ ಎರಡು ಹೈಮಾಸ್ಟ್ ಬೀದಿ ದೀಪಗಳ ಅಳವಡಿಕೆಯೂ ಯೋಜನೆಯಲ್ಲಿ ಸೇರಿವೆ.
ಇದೇ ವೇಳೆ ನಾಲ್ವಾಡಗಲ್ಲಿಯ ಓಂಕಾರೇಶ್ವರ ದೇವಸ್ಥಾನದ ಫಾರ್ಮ್ ನಂ. 3ರ ಉತಾರವನ್ನು ಮಾಡಿಸಿ ದೇವಸ್ಥಾನ ಸಮಿತಿಯವರಿಗೆ ವಿತರಿಸಲಾಯಿತು.
ಐತಿಹಾಸಿಕ ಪಂಚರ ಹೊಂಡ ಬಾವಿಯನ್ನು ಸ್ವಚ್ಛಗೊಳಿಸಿ, ಅಲ್ಲಿಂದ ಮೋಟರ್ ಅಳವಡಿಸುವ ಮೂಲಕ ಪೈಪ್‌ಲೈನ್ ಮೂಲಕ ಶಿವಳ್ಳಿಯವರ ಓಣಿ, ಗಾಳಪ್ಪನವರ ಓಣಿ, ಎಲಿಗಾರವರ ಓಣಿ, ಮಕಾನದಾರ ಮನೆ ಲೈನ್ ಹಾಗೂ ವೆಂಕಟೇಶ್ವರ ದೇವಸ್ಥಾನದ ಸುತ್ತಮುತ್ತಲಿನ ನಿವಾಸಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಿವಪ್ಪ ತಿಪ್ಪಣ್ಣ ಬಳ್ಳಾರಿ ಅವರು ಕಾಮಗಾರಿಯ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರಭು ಬುರಬುರೆ, ಬಿ.ಬಿ. ಅಸೂಟಿ, ಎಂ.ಸಿ. ಶೇಖ, ಬರಕತಲಿ ಮುಲ್ಲಾ, ಓಣಿಯ ಹಿರಿಯರಾದ ಬುಡ್ಡಣ್ಣ ಹಬೀಬ, ಅಶೋಕ ಜೈನ, ಈರಣ್ಣ ಲಕ್ಕುಂಡಿ, ಕುಬೇರಪ್ಪ ಪರ್ವತಗೌಡ್ರ, ವಿ.ಕೆ. ಮಟ್ಟಿ, ಅಪ್ಪುರಾಜ ಭದ್ರಕಾಳಿಮಠ, ಪ್ರವೀಣ ವಾರಕರ, ಸಿದ್ದಣ್ಣ ಹರ್ತಿ, ಮಂಜುನಾಥ ಲಕ್ಕುಂಡಿ, ಬಸವರಾಜ ಗಾಳಪ್ಪನವರ, ಬಸವರಾಜ ಹರ್ತಿ, ಮಲ್ಲಪ್ಪ ಅಣ್ಣಿಗೇರಿ, ಶ್ರೀಧರ ವಜ್ರಬಂಡಿ, ನಜೀರ ಕುನ್ನಿಬಾವಿ, ಮಂಜು ಮುಳಗುಂದ ಸೇರಿದಂತೆ ವಾರ್ಡ್ ನಂ. 24ರ ಗುರುಹಿರಿಯರು, ಯುವಕರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು.



