ವಿಜಯಸಾಕ್ಷಿ ಸುದ್ದಿ, ಗದಗ: ಸಹಕಾರಿ ಸಂಘ-ಸಂಸ್ಥೆಗಳು ಪ್ರಗತಿ ಹೊಂದಲು ಸದಸ್ಯರು ಹಾಗೂ ಶೇರುದಾರರು ಫೋಟ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅವಶ್ಯವಾಗಿದೆ ಎಂದು ಗದುಗಿನ ಕೃತಪುರ ಅರ್ಬನ್ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ಅಧ್ಯಕ್ಷ ಮಹೇಶ ಕೋಟಿ ಹೇಳಿದರು.
ನಗರದ ಕಲ್ಯಾಣ ಬಸವೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ರವಿವಾರ ಜರುಗಿದ ಕೃತಪುರ ಅರ್ಬನ್ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಹಕಾರಿ ಸಂಘದಲ್ಲಿ ಸಾಲ ಪಡೆದ ಸಾಲಗಾರರಷ್ಟೇ ಜಾಮೀನುದಾರರೂ ಜವಾಬ್ದಾರರಾಗಿರುತ್ತಾರೆ. ಸದಸ್ಯರು ಸಹಕಾರಿಯ ಫೋಟ್ ನಿಯಮಗಳನ್ನು ಪಾಲಿಸಬೇಕು. ನಿಯಮ ಉಲ್ಲಂಘಿಸಿದಲ್ಲಿ ಸಹಕಾರಿ ಬೈಲಾ ಪ್ರಕಾರ ಸದಸ್ಯತ್ವದಿಂದ ಅನರ್ಹರಾಗುವ ಸಾಧ್ಯತೆಯಿದೆ ಎಂದು ತಿಳಿಸಿದರು.
ಸಾಲಗಾರರು ತಾವು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಬೇಕು. ಜಾಮೀನುದಾರರು ಸಹ ಸಾಲ ಮರುಪಾವತಿ ಕುರಿತು ನಿಗಾ ವಹಿಸಬೇಕು. ಹಿರಿಯರ ಪರಿಶ್ರಮದಿಂದ ಸ್ಥಾಪನೆಯಾದ ಈ ಸಹಕಾರಿ ಸಂಸ್ಥೆಯನ್ನು ಮತ್ತಷ್ಟು ಪ್ರಗತಿಯತ್ತ ಕೊಂಡೊಯ್ಯಲು ನಿರ್ದೇಶಕರು ಹಾಗೂ ಶೇರುದಾರರು ಸಹಕರಿಸಬೇಕು ಎಂದು ಮನವಿ ಮಾಡಿದರು.
728 ಶೇರುದಾರರನ್ನು ಹೊಂದಿರುವ ಸಹಕಾರಿಯು 11 ಲಕ್ಷ 26 ಸಾವಿರ ರೂ.ಗಳ ಶೇರು ಬಂಡವಾಳ ಹೊಂದಿದೆ. 2025-26ನೇ ಸಾಲಿನಲ್ಲಿ ಸಹಕಾರಿಯು 3 ಕೋಟಿ 10 ಲಕ್ಷ 57 ಸಾವಿರ ರೂ.ಗಳ ವ್ಯವಹಾರ ನಡೆಸಿ, 11 ಲಕ್ಷ 44 ಸಾವಿರ ರೂ. ನಿವ್ವಳ ಲಾಭ ಗಳಿಸಿದೆ. ಶೇರುದಾರರಿಗೆ ಶೇ.8ರಷ್ಟು ಲಾಭಾಂಶ ನೀಡಲಾಗುವುದು ಎಂದು ವಾರ್ಷಿಕ ವರದಿ ಮಂಡಿಸಿ ಮಹೇಶ ಕೋಟಿ ತಿಳಿಸಿದರು.
ವೇದಿಕೆಯಲ್ಲಿ ನಿರ್ದೇಶಕರಾದ ಬಸವರಾಜ ರಾಮನಕೊಪ್ಪ, ಬಸವರಾಜ ಕೊರ್ಲಹಳ್ಳಿ, ಗಂಗಾಧರ ಮೇಲಗಿರಿ, ತೋಂಟೇಶ ಮಾನ್ವಿ, ಶಂಭು ಕಾರಕಟ್ಟಿ, ಸುಶೀಲಾ ಕೋಟಿ, ಸುರೇಖಾ ಪಿಳ್ಳಿ, ಕಲ್ಯಾಣಪ್ಪ ಕೋಟಿ, ಶರಣಬಸವ ಮಠದ ಹಾಗೂ ಶೈಲೇಶ ಬಾಗಮಾರ ಉಪಸ್ಥಿತರಿದ್ದರು. ಸೌಹಾರ್ದ ಫೆಡರೇಷನ್ ಗದಗ ಜಿಲ್ಲಾ ಸಂಯೋಜಕಿ ಗಂಗಮ್ಮ ನಾಯಕ ಭಾಗವಹಿಸಿದ್ದರು.
ಸುಶೀಲಾ ಕೋಟಿ ಸ್ವಾಗತಿಸಿದರು. ಸುರೇಖಾ ಪಿಳ್ಳಿ ಕಾರ್ಯಕ್ರಮ ನಿರೂಪಿಸಿದರು. ಗಂಗಾಧರ ಮೇಲಗಿರಿ ವಂದಿಸಿದರು.
ಸಭೆಯಲ್ಲಿ ನಗರಸಭೆಯ ಮಾಜಿ ಸದಸ್ಯ ಶರಣಪ್ಪ ಗದ್ದಿಕೇರಿ, ಶಿವಪುತ್ರಪ್ಪ ಕುಂದಗೋಳ, ಸಂಧ್ಯಾ ಕೋಟಿ, ಚೈತ್ರಾ ಕೋಟಿ, ಅಶೋಕ ಕುಡತಿನ್ನಿ, ಈರಪ್ಪ ಕೋಟ್ನೇಕಲ್ಲ, ಎಸ್.ಟಿ. ಪಾಟೀಲ, ಮಹಾರುದ್ರಪ್ಪ ನರಗುಂದ, ಮಲ್ಲಿಕಾರ್ಜುನ ಕೆಂಧೂಳಿ, ರಾಜಣ್ಣ ಬೇಲೇರಿ, ಸಿದ್ಧಮಲ್ಲಪ್ಪ ಕಾವೇರಿ, ರಮೇಶ ಪಿಳ್ಳಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.



