ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಸರ್ಕಾರಿ ಸೇವೆಗಳು ಮತ್ತು ಯೋಜನೆಗಳ ಸೌಲಭ್ಯ ಪಡೆಯಲು ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ, ಆಡಳಿತ ವ್ಯವಸ್ಥೆಯನ್ನೇ ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಮಹತ್ವಾಕಾಂಕ್ಷೆಯ ‘ಪ್ರಜಾಸೇವಾ ಅಭಿಯಾನ’ ಆರಂಭಿಸುತ್ತಿದೆ. ಸೆಪ್ಟೆಂಬರ್ 5ರಂದು ವಿಜಯನಗರ ಜಿಲ್ಲೆಯ ಕೂಡ್ಲಿಗಿ ಹೋಬಳಿಯಿಂದ ಅಭಿಯಾನಕ್ಕೆ ಚಾಲನೆ ದೊರೆಯಲಿದೆ.
ಸಾರ್ವಜನಿಕರ ಕುಂದುಕೊರತೆಗಳನ್ನು ನೇರವಾಗಿ ಆಲಿಸಿ, ಸಾಧ್ಯವಾದ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸುವುದು ಹಾಗೂ ಬಾಕಿ ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಆಡಳಿತದಲ್ಲಿ ಪಾರದರ್ಶಕತೆ ಮತ್ತು ಅಧಿಕಾರಿಗಳ ಉತ್ತರದಾಯಿತ್ವವನ್ನು ಹೆಚ್ಚಿಸುವ ಮೂಲಕ ಜನಪರ ಸೇವೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಸರ್ಕಾರ ಯೋಜನೆ ರೂಪಿಸಿದೆ.
ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಾಲೂಕು ಕೇಂದ್ರದಲ್ಲಿ ಪ್ರಜಾಸೇವಾ ಸಭೆ ನಡೆಯಲಿದೆ. ಎರಡನೇ ಮತ್ತು ನಾಲ್ಕನೇ ಶನಿವಾರ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ತಾಲೂಕು ಅಥವಾ ಹೋಬಳಿ ಮಟ್ಟದಲ್ಲಿ ಸಭೆ ಆಯೋಜಿಸಲಾಗುವುದು. ಮುಂದಿನ ಮೂರರಿಂದ ನಾಲ್ಕು ತಿಂಗಳ ಕಾರ್ಯಕ್ರಮಗಳನ್ನು ಒಳಗೊಂಡ ಏಕೀಕೃತ ಕ್ಯಾಲೆಂಡರ್ ಕೂಡ ಸಿದ್ಧಪಡಿಸಲಾಗುತ್ತಿದೆ.
ಸಭೆಯ ಕುರಿತು ಸಾರ್ವಜನಿಕರಿಗೆ ಕನಿಷ್ಠ 15 ದಿನ ಮುಂಚಿತವಾಗಿ ಮನೆ-ಮನೆಗೆ ಕರಪತ್ರ ವಿತರಿಸಲಾಗುವುದು. ಸಭೆಯ ದಿನಾಂಕ, ಸಮಯ ಮತ್ತು ಸ್ಥಳದ ಮಾಹಿತಿಯನ್ನು ಕೃತಕ ಬುದ್ಧಿಮತ್ತೆ ಆಧಾರಿತ ಕಾಲ್ ಸೆಂಟರ್ ಮೂಲಕವೂ ನೀಡಲಾಗುತ್ತದೆ. ಸಾರ್ವಜನಿಕರು ತಮ್ಮ ಅರ್ಜಿಗಳು ಮತ್ತು ಅಹವಾಲುಗಳನ್ನು ಮುಂಚಿತವಾಗಿ ಗ್ರಾಮ ಒನ್ ಕೇಂದ್ರಗಳಲ್ಲಿ ಸಲ್ಲಿಸಬಹುದಾಗಿದೆ. ಸಭಾ ಸ್ಥಳದಲ್ಲಿಯೂ ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಅಗತ್ಯ ವ್ಯವಸ್ಥೆ ಇರಲಿದೆ.
ಸಭೆಯ ದಿನ ಹೊಸ ಅಹವಾಲುಗಳು ಹಾಗೂ ಈಗಾಗಲೇ ಸಲ್ಲಿಸಿದ್ದರೂ ಪರಿಹಾರವಾಗದ ಪ್ರಕರಣಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸಕಾಲ, ಸಿಎಸ್‌ಸಿ ಅಥವಾ ಐಪಿಜಿಆರ್‌ಎಸ್‌ನಲ್ಲಿ ನೋಂದಾಯಿಸಿ 21 ದಿನಗಳಾದರೂ ಸಮರ್ಪಕ ಪರಿಹಾರ ಸಿಗದ ಪ್ರಕರಣಗಳಿಗೆ ಆದ್ಯತೆ ನೀಡಲಾಗುವುದು. ಅರ್ಹ ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಮಂಜೂರಾತಿ ಪತ್ರಗಳನ್ನು ಸ್ಥಳದಲ್ಲಿಯೇ ವಿತರಿಸುವ ವ್ಯವಸ್ಥೆಯೂ ಇರಲಿದೆ.
ಪ್ರತಿ ಬುಧವಾರ ಅರ್ಜಿಗಳು ಮತ್ತು ಅಹವಾಲುಗಳ ಪ್ರಗತಿಯನ್ನು ಮೂರು ಹಂತಗಳಲ್ಲಿ ಪರಿಶೀಲಿಸಲಾಗುವುದು. ಬೆಳಿಗ್ಗೆ ತಾಲೂಕು ಮಟ್ಟದಲ್ಲಿ ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳು, ನಂತರ ಉಪವಿಭಾಗ ಮಟ್ಟದಲ್ಲಿ ಸಹಾಯಕ ಆಯುಕ್ತರು ಮತ್ತು ಮಧ್ಯಾಹ್ನ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಬಾಕಿ ಪ್ರಕರಣಗಳ ಪರಿಶೀಲನೆ ನಡೆಸಲಿದ್ದಾರೆ. ನಿಗದಿತ ಅವಧಿಯಲ್ಲಿ ಪರಿಹಾರವಾಗದ ಪ್ರಕರಣಗಳನ್ನು ಸ್ವಯಂಚಾಲಿತವಾಗಿ ಮೇಲಧಿಕಾರಿಗಳ ಹಂತಕ್ಕೆ ವರ್ಗಾಯಿಸಲಾಗುವುದು.
ಸಭಾ ಸ್ಥಳಗಳಲ್ಲಿ ವಿವಿಧ ಇಲಾಖೆಗಳ ಮಳಿಗೆಗಳನ್ನು ಸ್ಥಾಪಿಸಿ, ಸರ್ಕಾರಿ ಯೋಜನೆಗಳು ಹಾಗೂ ಅರ್ಹತಾ ಮಾನದಂಡಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು. ಸಾರ್ವಜನಿಕರು 1902 ಸಹಾಯವಾಣಿ ಸಂಖ್ಯೆ ಅಥವಾ ಐಪಿಜಿಆರ್‌ಎಸ್ ಪೋರ್ಟಲ್ ಮೂಲಕವೂ ತಮ್ಮ ಕುಂದುಕೊರತೆಗಳನ್ನು ದಾಖಲಿಸಬಹುದು.
ಜನರು ಸರ್ಕಾರಿ ಕಚೇರಿಗಳಿಗೆ ಅಲೆಯುವ ಬದಲು ಆಡಳಿತ ವ್ಯವಸ್ಥೆಯೇ ಜನರ ಬಳಿಗೆ ತಲುಪಬೇಕು ಎಂಬ ಉದ್ದೇಶದಿಂದ ಪ್ರಜಾಸೇವಾ ಅಭಿಯಾನ ರೂಪಿಸಲಾಗಿದೆ. ಅಹವಾಲುಗಳ ತ್ವರಿತ ಪರಿಹಾರ, ಅಧಿಕಾರಿಗಳ ಹೊಣೆಗಾರಿಕೆ ಹಾಗೂ ಪಾರದರ್ಶಕ ಆಡಳಿತವನ್ನು ಖಚಿತಪಡಿಸುವ ಮೂಲಕ ಜನಪರ ಸರ್ಕಾರದ ಆಶಯವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು.
ಡಾ. ಶಾಲಿನಿ ರಜನೀಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ



