HomeUncategorizedಸಮಾಜವನ್ನು ತಿದ್ದಿ ಮಾರ್ಗದರ್ಶನ ನೀಡುವವರು ಜಂಗಮರು: ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು

ಸಮಾಜವನ್ನು ತಿದ್ದಿ ಮಾರ್ಗದರ್ಶನ ನೀಡುವವರು ಜಂಗಮರು: ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು

ವಿಜಯಸಾಕ್ಷಿ ಸುದ್ದಿ, ಗದಗ: ಹಿಂಡಾಗಿರುವ ಗುಂಪಿಗೆ ಸಮಾಜ ಎನ್ನಲಾಗದು. ಸಂಸ್ಕಾರ ಹಾಗೂ ಧರ್ಮಾಚರಣೆ ಇರುವ ಸಮುದಾಯವೇ ನಿಜವಾದ ಸಮಾಜವಾಗಿದ್ದು, ಸಮಾಜವನ್ನು ತಿದ್ದಿ ಸರಿಯಾದ ಮಾರ್ಗದಲ್ಲಿ ಮುನ್ನಡೆಸುವ ಜವಾಬ್ದಾರಿ ಜಂಗಮರ ಮೇಲಿದೆ ಎಂದು ನರೇಗಲ್‌ನ ಪೂಜ್ಯಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ನಗರದ ಕೆಎಸ್‌ಆರ್‌ಟಿಸಿ ಡಿಪೋ ಹಿಂಭಾಗದಲ್ಲಿರುವ ಶ್ರೀ ಕುಮಾರೇಶ್ವರ ಧಾರ್ಮಿಕ ಪಾಠಶಾಲೆಯಲ್ಲಿ ರವಿವಾರ ಅಖಿಲ ಭಾರತ ಜಂಗಮ ಸೇವಾ ಸಮಿತಿ ಗದಗ ಹಾಗೂ ಪಂಚವಟಿ ಧಾರ್ಮಿಕ ಗುರುಕುಲ ಜನಕಲ್ಯಾಣ ಟ್ರಸ್ಟ್, ನರಸಾಪುರ–ಗದಗ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಪದಾಧಿಕಾರಿಗಳ ಪದಗ್ರಹಣ, ಸಮಿತಿಯ ವಾರ್ಷಿಕೋತ್ಸವ, ‘ಜಂಗಮಶ್ರೀ’ ಪ್ರಶಸ್ತಿ ಪ್ರದಾನ ಹಾಗೂ ಉಡಿ ತುಂಬುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಂಗಮ ಸಮಾಜ ಶೈಕ್ಷಣಿಕ, ಧಾರ್ಮಿಕ ಹಾಗೂ ರಾಜಕೀಯವಾಗಿ ಹಿಂದುಳಿದಿಲ್ಲವಾದರೂ ಆರ್ಥಿಕವಾಗಿ ಹಿಂದುಳಿದಿದೆ. ದುಶ್ಚಟಗಳಿಂದ ಸಮಾಜ ಹಾಳಾಗುತ್ತಿದ್ದು, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಮುಂದಾಗಬೇಕು. ಹಳ್ಳಿಗಳಲ್ಲಿರುವ ಹಳೆಯ ಮಠಗಳನ್ನು ಅಭಿವೃದ್ಧಿಪಡಿಸಿ ಧಾರ್ಮಿಕ ಆಚರಣೆಗಳನ್ನು ಮುಂದುವರಿಸಬೇಕು. ಪಾಲಕರು ಮಕ್ಕಳಿಗೆ ಧಾರ್ಮಿಕ ಗ್ರಂಥಗಳನ್ನು ಓದಿಸುವ ಮೂಲಕ ಸಂಸ್ಕಾರ ಹಾಗೂ ಧರ್ಮಾಚರಣೆಯ ಮಹತ್ವ ತಿಳಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ಗ್ರಾಹಕ ನ್ಯಾಯ ಪೀಠದ ನಿವೃತ್ತ ಸದಸ್ಯ ಎಫ್.ಪಿ. ಲಕ್ಷ್ಮೇಶ್ವರಮಠ ಮಾತನಾಡಿ, ಜನಸೇವೆಯೇ ಜನಾರ್ಧನ ಸೇವೆಯಾಗಿದ್ದು, ಸಮಾಜಸೇವಕರು ಹಾಗೂ ಸರ್ಕಾರಿ ನೌಕರರು ಕರ್ತವ್ಯನಿಷ್ಠೆಯಿಂದ ಸೇವೆ ಸಲ್ಲಿಸಬೇಕು ಎಂದರು.

ಅಖಿಲ ಭಾರತ ಜಂಗಮ ಸೇವಾ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತೋಟಯ್ಯ ಗಡ್ಡಿಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಿತಿಯು ಮೂರು ವರ್ಷ ಪೂರೈಸಿ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದೆ. ಕಳೆದ ವರ್ಷ 64 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, 35 ವಿದ್ಯಾರ್ಥಿಗಳಿಗೆ ಸಂಸ್ಕಾರ ಶಿಬಿರ, 100ಕ್ಕೂ ಹೆಚ್ಚು ವಟುಗಳಿಗೆ ಅಯ್ಯಾಚಾರ–ಲಿಂಗದೀಕ್ಷೆ ನೀಡುವುದರ ಜತೆಗೆ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹೂವಿನಹಡಗಲಿ ಗವಿಮಠದ ಪೂಜ್ಯಶ್ರೀ ಡಾ. ಹಿರಿ ಶಾಂತವೀರ ಮಹಾಸ್ವಾಮಿಗಳು ಹಾಗೂ ಅಸೂಟಿಯ ರೇವಣಸಿದ್ದೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಅಖಿಲ ಭಾರತ ಜಂಗಮ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಕುಮಾರಸ್ವಾಮಿ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.

ರುದ್ರಾರಾಧ್ಯ ಶಾಸ್ತ್ರಿಗಳು ಚೌಕಿಮಠ, ವೀರಯ್ಯ ಶಾಸ್ತ್ರಿಗಳು ಹಿರೇಮಠ, ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ವಸ್ತ್ರದ, ಅಮೃತಹನಿ ಸಂಸ್ಥಾಪಕ ಫಕೀರಯ್ಯ ಹಿರೇಮಠ, ಸಾಮಾಜಿಕ ಕಾರ್ಯಕರ್ತ ಶಿವಾನಂದಯ್ಯ ಹಿರೇಮಠ, ಆನಂದಯ್ಯ ವಿರಕ್ತಮಠ, ಎಂ.ಎನ್. ಶಿರೋಳಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕುಮಾರಸ್ವಾಮಿ ಹಿರೇಮಠ ಹಾಗೂ ತಂಡದವರು ಪ್ರಾರ್ಥಿಸಿದರು. ಉಮಾಪತಿ ಭೂಸನೂರಮಠ ಕಾರ್ಯಕ್ರಮ ನಿರೂಪಿಸಿದರು.

‘ಜಂಗಮಶ್ರೀ’ ಪ್ರಶಸ್ತಿ ಪ್ರದಾನ

ಸಾಹಿತ್ಯ, ಸಾಮಾಜಿಕ ಸೇವೆ, ವೈದಿಕ, ಕೃಷಿ, ಸಂಗೀತ, ಉದ್ಯಮ, ಶಿಕ್ಷಣ, ದಾಸೋಹ, ವೈದ್ಯಕೀಯ, ಕಲೆ, ಕ್ರೀಡೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ರುದ್ರಾರಾಧ್ಯ ಶಾಸ್ತ್ರಿಗಳು ಚೌಕಿಮಠ, ರೇವಣಸಿದ್ದಯ್ಯ ಸ್ವಾಮಿಗಳು ಹಿರೇಮಠ, ವೀರಯ್ಯ ಶಾಸ್ತ್ರಿಗಳು ಹಿರೇಮಠ, ಬಸಯ್ಯ ಸಾಸ್ವಿಹಳ್ಳಿಮಠ, ಡಾ. ಶಿವಬಸಯ್ಯ ಗಡ್ಡದಮಠ, ಕಳಕನಗೌಡ ಪಾಟೀಲ, ವೀರಭದ್ರಯ್ಯ ಹಿರೇಮಠ, ಚಂದ್ರಕಲಾ ಇಟಗಿಮಠ, ವಿನಯಕುಮಾರ ಗಂಧದ, ಈಶ್ವರಯ್ಯ ಹಿರೇಮಠ, ಶಿವಕುಮಾರ ಸ್ವಾಮಿಮಠ, ಶಿವಯ್ಯ ಅಲ್ಲಮಯ್ಯನವರ, ಧನಲಕ್ಷ್ಮೀ ಹಾಲ್ಮಠ, ಡಾ. ತೇಜಸ್ವಿನಿ ಹಿರೇಮಠ, ಅನುಸೂಯ ಹೊಸೂರುಮಠ, ಫಕ್ಕಿರಗೌಡ ಪಾಟೀಲ ಹಾಗೂ ಷಡಕ್ಷರಯ್ಯ ಹಿರೇಮಠ ಅವರಿಗೆ ‘ಜಂಗಮಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img