ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಪಟ್ಟಣದಲ್ಲಿ ದಿನನಿತ್ಯ ಹಾಗೂ ರವಿವಾರ ನಡೆಯುತ್ತಿರುವ ಸಂತೆ ಮಾರುಕಟ್ಟೆಯನ್ನು ಸ್ಥಳಾಂತರಿಸಿ, ಪಾಳುಬಿದ್ದಿರುವ ಎಪಿಎಂಸಿ ಮಾರುಕಟ್ಟೆಯನ್ನು ದುರಸ್ತಿಗೊಳಿಸಿ ಕಾರ್ಯಾರಂಭ ಮಾಡಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಮಂಗಳವಾರ ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸಂತೋಷ ಕುರಿ, ಸಂತೆ ಮಾರುಕಟ್ಟೆಯಿಂದಾಗಿ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಹೇಳಿದರು. ಗ್ರಾಮೀಣ ಪ್ರದೇಶಗಳಿಂದ ವಿವಿಧ ಕೆಲಸಗಳಿಗಾಗಿ ಪಟ್ಟಣಕ್ಕೆ ಆಗಮಿಸುವ ಜನರು ಪೊಲೀಸ್ ಠಾಣೆ, ತಾಲೂಕು ಆಸ್ಪತ್ರೆ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ, ರೇಷ್ಮೆ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಹಾಗೂ ಅರಣ್ಯ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಿಗೆ ಮಾರುಕಟ್ಟೆ ಮಾರ್ಗವಾಗಿಯೇ ತೆರಳಬೇಕಾದ ಅನಿವಾರ್ಯತೆ ಇದೆ ಎಂದರು.
ಇಕ್ಕಟ್ಟಾದ ರಸ್ತೆಯಲ್ಲಿ ಮಾರುಕಟ್ಟೆ ನಡೆಯುತ್ತಿರುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಹಲವು ಅಪಘಾತಗಳು ಸಂಭವಿಸಿದ ಉದಾಹರಣೆಗಳಿವೆ ಎಂದು ತಿಳಿಸಿದರು.
ಬಸ್ ನಿಲ್ದಾಣದ ಸಮೀಪದಲ್ಲಿರುವ ಸರ್ಕಾರದ ಎಪಿಎಂಸಿ ಜಾಗೆ ಪಾಳುಬಿದ್ದು ಕಸ ಶೇಖರಣಾ ಘಟಕವಾಗಿ ಮಾರ್ಪಟ್ಟಿದೆ. ಇದರಿಂದ ದುರ್ವಾಸನೆ ಬೀರುತ್ತಿದ್ದು, ನಿತ್ಯ ಸಂಚರಿಸುವ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು.
ಎಪಿಎಂಸಿ ಮಾರುಕಟ್ಟೆಯನ್ನು ಕೂಡಲೇ ದುರಸ್ತಿಗೊಳಿಸಿ ದಿನನಿತ್ಯ ಹಾಗೂ ರವಿವಾರ ನಡೆಯುವ ಸಂತೆಯನ್ನು ಅಲ್ಲಿಗೆ ಸ್ಥಳಾಂತರಿಸಬೇಕು. ರೈತರ ವ್ಯಾಪಾರ–ವಹಿವಾಟಿಗೆ ಸೂಕ್ತ ಅವಕಾಶ ಕಲ್ಪಿಸಬೇಕು. ಇಲ್ಲವಾದಲ್ಲಿ ಹೋರಾಟದ ಮೂಲಕ ನ್ಯಾಯಯುತ ಬೇಡಿಕೆ ಈಡೇರಿಸಿಕೊಳ್ಳಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಪಪಂ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ, ರಾಮಣ್ಣ ಕಂಬಳಿ, ಫಕ್ಕೀರೇಶ ರಟ್ಟಿಹಳ್ಳಿ, ವಿಠ್ಠಲ ಭಿಡವೆ, ಸಂತೋಷ ತೋಡೆಕಾರ, ಬಸವರಾಜ ಕಲ್ಯಾಣಿ, ಚಂದ್ರು ಜೋಗೇರ, ಜಗದೀಶ ತೇಲಿ, ಗಣೇಶ ಬಿಢವೆ, ಪರಶುರಾಮ ಡೊಂಕಬಳ್ಳಿ, ಲಕ್ಷ್ಮಣ ಪವಾರ, ಹನಮಂತ ಕುರಿ, ಮಾರುತಿ ಕೋಳಿ, ವಿಶ್ವನಾಥ ಧಳವೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.



