ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಲಕ್ಷ್ಮೇಶ್ವರ, ಶಿರಹಟ್ಟಿ ಹಾಗೂ ಮುಂಡರಗಿ ತಾಲೂಕುಗಳನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ ಸಮಗ್ರ ರೈತ ಸಂಘಟನೆಗಳ ಒಕ್ಕೂಟ, ವಿವಿಧ ರೈತ ಸಂಘಟನೆಗಳು ಹಾಗೂ ಕರವೇ ಸಂಘಟನೆಯವರು ಮಂಗಳವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಮನವಿ ಸಲ್ಲಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಬರ ಪರಿಸ್ಥಿತಿ ವೀಕ್ಷಣೆ ಹಾಗೂ ಮುಕ್ತಿಮಂದಿರ ಧರ್ಮಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಲಕ್ಷ್ಮೇಶ್ವರದಲ್ಲಿ ಮನವಿ ಸಲ್ಲಿಸಲಾಯಿತು.
ಮನವಿ ಪತ್ರದಲ್ಲಿ, ಮುಂಗಾರು ಮಳೆಯ ಕೊರತೆಯಿಂದ ಮೂರು ತಾಲೂಕುಗಳಲ್ಲೂ ಬೆಳೆಗಳು ಒಣಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಲಾಗಿದೆ. ಬೀಜ, ಗೊಬ್ಬರ, ಉಳುಮೆ ಹಾಗೂ ಕೂಲಿ ಸೇರಿದಂತೆ ಕೃಷಿಗೆ ಮಾಡಿದ ಖರ್ಚು ಕೂಡ ಮರಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿವರಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಅವರು ಪರಿಸ್ಥಿತಿ ಪರಿಶೀಲಿಸಿ ಬರ ಘೋಷಣೆಯ ಭರವಸೆ ನೀಡಿದ್ದರೂ, ತಾಲೂಕುಗಳನ್ನು ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿರುವುದು ಅನ್ಯಾಯವಾಗಿದೆ ಎಂದು ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಬೆಳೆನಷ್ಟಕ್ಕೆ ಎಕರೆಗೆ ₹೫೦ ಸಾವಿರ ಪರಿಹಾರಕ್ಕೆ ಒತ್ತಾಯ
ಮೂರು ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಿ, ಜಂಟಿ ಬೆಳೆನಷ್ಟ ಸಮೀಕ್ಷೆ ನಡೆಸಬೇಕು. ಪ್ರತಿ ಎಕರೆಗೆ ಕನಿಷ್ಠ ₹೫೦ ಸಾವಿರ ಪರಿಹಾರ ನೀಡಬೇಕು ಹಾಗೂ ರೈತರ ₹೧ ಲಕ್ಷದವರೆಗಿನ ಕೃಷಿ ಸಾಲ ಮನ್ನಾ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಬೆಳೆ ವಿಮೆ ಹಾಗೂ ಎಸ್‌ಡಿಆರ್‌ಎಫ್ ಪರಿಹಾರವನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕು. ಜಾನುವಾರುಗಳಿಗೆ ಮೇವು ಬ್ಯಾಂಕ್ ಆರಂಭಿಸಬೇಕು. ಉದ್ಯೋಗ ಖಾತರಿ ಯೋಜನೆಯಡಿ ಕೆಲಸದ ದಿನಗಳನ್ನು ಹೆಚ್ಚಿಸಿ, ಕೂಲಿಯನ್ನು ಸಕಾಲದಲ್ಲಿ ಪಾವತಿಸುವ ಮೂಲಕ ಗ್ರಾಮೀಣ ಜನರ ಗುಳೆ ತಡೆಯಬೇಕು ಎಂದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಹೊನ್ನಪ್ಪ ವಡ್ಡರ, ಮಹೇಶ ಹೊಗೆಸೊಪ್ಪಿನ, ನಾಗರಾಜ ಚಿಂಚಲಿ, ಸೋಮಣ್ಣ ಡಾಣಗಲ್, ಚನ್ನಪ್ಪ ಷಣ್ಮುಖಿ, ಚಂದ್ರು ಮಾಗಡಿ, ಬಸವರಾಜ ಹಿರೇಮನಿ, ಮಂಜು ಮುಳಗುಂದ, ಸುರೇಶ ಹಟ್ಟಿ, ಭರಮಣ್ಣ ರೊಟ್ಟಿಗವಾಡ, ಎಚ್.ಎಚ್. ಪಾಟೀಲ, ಬಿ.ಎನ್. ಉಮಚಗಿ, ಶಿವಪ್ಪ ಹುಲಕೋಟಿ, ಬಸಣ್ಣ ಹಂಜಿ, ದ್ಯಾಮಪ್ಪ ಮತ್ತೂರ, ಬಸವರಾಜ ಪ್ಯಾಟಿ, ಶಿವಾನಂದ ಲಿಂಗಶೆಟ್ಟಿ ಸೇರಿದಂತೆ ವಿವಿಧ ರೈತ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಹಾಗೂ ರೈತರು ಪಾಲ್ಗೊಂಡಿದ್ದರು.



