ಬೆಂಗಳೂರು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಗೆ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಗಡಿಪಾರು ಆದೇಶ ಮಾಡುವ ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿರುವ ಹೈಕೋರ್ಟ್, ಎಸ್ಪಿಗಳಿಗೆ ಈ ಅಧಿಕಾರ ನೀಡಿ ರಾಜ್ಯ ಸರ್ಕಾರ 2025ರ ನವೆಂಬರ್ 18ರಂದು ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಪಡಿಸಿ ಆದೇಶಿಸಿದೆ.
ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಡಿಪಾರು ಮಾಡಿದ್ದ ಆದೇಶ ಪ್ರಶ್ನಿಸಿ ಚಂದ್ರಕಾಂತ್ ಶಂಕರ್ ವಡ್ಡರ್ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಅಪರಾಧ ಎಸಗುವ ಸಾಧ್ಯತೆಯಿರುವ ಹಾಗೂ ಈಗಾಗಲೇ ಕೆಲ ಅಪರಾಧಗಳಲ್ಲಿ ಶಿಕ್ಷೆಗೊಳಗಾದ ವ್ಯಕ್ತಿಗಳನ್ನು ಗಡಿಪಾರು ಮಾಡಲು ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 55 ಮತ್ತು 56ರ ಅಡಿ ಅಧಿಕಾರ ನೀಡಲಾಗಿದೆಯಾದರೂ, ಕಾಯ್ದೆಯಂತೆ ಬೆಂಗಳೂರು ಮತ್ತು ಇತರ ಕಮಿಷನರೇಟ್ಗಳಲ್ಲಿ ಪೊಲೀಸ್ ಕಮಿಷನರ್ಗಳು ಮಾತ್ರ ಸಮರ್ಥ ಪ್ರಾಧಿಕಾರವಾಗಿದ್ದಾರೆಂದೂ, ಇತರ ಪ್ರದೇಶಗಳಲ್ಲಿ ಸರ್ಕಾರ ಅಧಿಸೂಚನೆ ಮೂಲಕ ಜಿಲ್ಲಾಧಿಕಾರಿ ಅಥವಾ ಉಪ ವಿಭಾಗಾಧಿಕಾರಿಗಳಿಗೆ ಮಾತ್ರ ಈ ಅಧಿಕಾರ ನೀಡಬಹುದೆಂದೂ ಪೀಠ ಸ್ಪಷ್ಟಪಡಿಸಿದೆ. ಶಾಸನಸಭೆ ರೂಪಿಸಿದ ಶಾಸನಬದ್ಧ ಅವಕಾಶವನ್ನು ಕಾರ್ಯಾಂಗದ ಒಂದು ಅಧಿಸೂಚನೆಯ ಮೂಲಕ ವಿಸ್ತರಿಸಿ, ಕಾಯ್ದೆಯಲ್ಲಿ ಉಲ್ಲೇಖವಿಲ್ಲದ ಅಧಿಕಾರಿಗೆ ಅಧಿಕಾರ ನೀಡುವುದಕ್ಕೆ ಅವಕಾಶವಿಲ್ಲ ಎಂದು ಪೀಠ ಹೇಳಿದೆ.
ಸಂಗೀತಾ ಸೂರ್ಯವಂಶಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲೇಖಿಸಿದ ನ್ಯಾಯಪೀಠ, ಸರ್ಕಾರದ ಸುತ್ತೋಲೆ ಅಥವಾ ಅಧಿಸೂಚನೆಗಳು ಮೂಲ ಕಾಯ್ದೆಯ ನಿಯಮಗಳಿಗೆ ವಿರುದ್ಧವಾದ ಕ್ರಮಕ್ಕೆ ಮುಂದಾಗಲು ಅವಕಾಶವಿಲ್ಲವೆಂದೂ, ಆದ್ದರಿಂದ ಕಮಿಷನರ್, ಜಿಲ್ಲಾಧಿಕಾರಿ ಅಥವಾ ಉಪವಿಭಾಗಾಧಿಕಾರಿಯಲ್ಲದ ಎಸ್ಪಿಗೆ ಗಡಿಪಾರು ಆದೇಶ ಹೊರಡಿಸುವ ಅಧಿಕಾರವಿಲ್ಲವೆಂದೂ ಸ್ಪಷ್ಟಪಡಿಸಿತು. ಇಂತಹ ಆದೇಶಗಳು ಅಧಿಕಾರ ವ್ಯಾಪ್ತಿ ಮೀರಿದ್ದಾಗಿರುತ್ತವೆ ಎಂದು ಪೀಠ ತಿಳಿಸಿದೆ.
ಆದರೆ, ಕರ್ನಾಟಕ ಪೊಲೀಸ್ ಕಾಯ್ದೆ 1963ರ ಪ್ರಕಾರ ಕಾನೂನುಬದ್ಧವಾಗಿ ಅಧಿಕಾರ ಹೊಂದಿರುವ ಸೂಕ್ತ ಪ್ರಾಧಿಕಾರದಿಂದ ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಲು ಅವಕಾಶವಿರುತ್ತದೆ ಎಂದು ಪೀಠ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ: ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ನಿವಾಸಿ ಚಂದ್ರಕಾಂತ್ ಶಂಕರ್ ವಡ್ಡರ್ ಅವರನ್ನು ಬೆಳಗಾವಿ ಎಸ್ಪಿ 2026ರ ಏಪ್ರಿಲ್ 28ರಂದು ಸೆಕ್ಷನ್ 55ರ ಅಡಿ ಗಡಿಪಾರು ಮಾಡಿ ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ಚಂದ್ರಕಾಂತ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, 2025ರ ನವೆಂಬರ್ 25ರ ಅಧಿಸೂಚನೆ ಮೂಲಕ ರಾಜ್ಯ ಸರ್ಕಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಅಧಿಕಾರ ನೀಡಿ ಆದೇಶಿಸಿದೆ ಎಂದು ವಾದ ಮಂಡಿಸಿದ್ದರು.

