ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಎಲ್ ನಿನೋ ಪ್ರಭಾವದಿಂದ ಮಳೆ ಪ್ರಮಾಣ ಕಡಿಮೆಯಾಗಿದ್ದು, ಈ ತಿಂಗಳಾಂತ್ಯದ ವೇಳೆಗೆ 180ರಿಂದ 200 ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗುವ ಸಾಧ್ಯತೆಯಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಬಿ. ಖಂಡ್ರೆ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಶೀಘ್ರವೇ 24 ಬ್ಲಾಕ್‌ಗಳನ್ನು ಬರಪೀಡಿತ ಎಂದು ಘೋಷಿಸಲು ಸಿದ್ಧತೆ ನಡೆದಿದೆ ಎಂದು ತಿಳಿಸಿದರು. ತಿಂಗಳಾಂತ್ಯಕ್ಕೆ ನಡೆಯುವ ಮತ್ತೊಂದು ಗ್ರೌಂಡ್ ಟ್ರೂಥಿಂಗ್‌ನಲ್ಲಿ ಈ ಸಂಖ್ಯೆ ಹೆಚ್ಚಳವಾಗಿ 180ರಿಂದ 200ಕ್ಕೆ ತಲುಪಲಿದೆ ಎಂದರು.
ರಾಜ್ಯದಲ್ಲಿ 2026ರ ಮುಂಗಾರು ಮತ್ತು ಬರ ಪರಿಸ್ಥಿತಿ ಹಾಗೂ ಇತರೆ ನೈಸರ್ಗಿಕ ವಿಕೋಪ ಪರಿಸ್ಥಿತಿಗಳ ಪರಾಮರ್ಶೆ ಮತ್ತು ಸಮರ್ಥ ನಿರ್ವಹಣೆಗೆ ನೀತಿ ನಿರೂಪಣೆ ಹಾಗೂ ಅಗತ್ಯ ಕ್ರಮಗಳ ಬಗ್ಗೆ ನಿರ್ಣಯಿಸಲು ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅಧ್ಯಕ್ಷತೆಯಲ್ಲಿ ರಚಿಸಿರುವ ಸಂಪುಟದ ಉಪ ಸಮಿತಿಯ ಸದಸ್ಯರಾಗಿರುವುದಾಗಿ ಖಂಡ್ರೆ ತಿಳಿಸಿದರು. ಈ ಸಂಬಂಧ ಇತ್ತೀಚೆಗೆ ನಡೆದ ಸಭೆಯಲ್ಲಿ ಸಮಗ್ರ ಚರ್ಚೆ ನಡೆಸಲಾಗಿದೆ ಎಂದು ಅವರು ಹೇಳಿದರು.
ಎನ್‌ಡಿಆರ್‌ಎಫ್‌ನಿಂದ ಒಣಭೂಮಿ ಮತ್ತು ನೀರಾವರಿ ಭೂಮಿಗೆ ಪರಿಹಾರ ನೀಡಲಾಗುತ್ತದೆಯೆಂದೂ, ಇದರ ಜೊತೆಗೆ ರಾಜ್ಯದಲ್ಲಿ ತೀವ್ರ ಬೆಳೆ ಹಾನಿಯಾಗಿರುವ ಪ್ರದೇಶಗಳಿಗೆ ಹೆಚ್ಚುವರಿ ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳುವರೆಂದೂ ಸಚಿವರು ತಿಳಿಸಿದರು. ಪ್ರಸ್ತುತ ಬರಪೀಡಿತ ಎಂದು ಘೋಷಿಸಲಾಗಿರುವ 101 ಬ್ಲಾಕ್‌ಗಳಿಗೆ 2,600 ಕೋಟಿ ರೂಪಾಯಿ ನೀಡಬೇಕು ಎಂಬುದು ರಾಜ್ಯದ ಬೇಡಿಕೆಯಾಗಿದೆ ಎಂದು ಅವರು ಹೇಳಿದರು.
ಕರ್ನಾಟಕದ ಬಿಜೆಪಿ ಸಂಸತ್ ಸದಸ್ಯರು ಮತ್ತು ನಾಯಕರು ರಾಜ್ಯದ ಬರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರೈತರಿಗೆ ನೆರವಾಗಲು ಕೇಂದ್ರದ ಮೇಲೆ ಒತ್ತಡ ಹೇರಿ ಹಣ ಕೊಡಿಸುವ ಕಾರ್ಯ ಮಾಡಬೇಕೆಂದೂ, ಅದು ಬಿಟ್ಟು ಪಾದಯಾತ್ರೆ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆಂದೂ ಸಚಿವ ಖಂಡ್ರೆ ಆಕ್ಷೇಪಿಸಿದರು.



