ಸ್ಯಾಂಡಲ್‌ವುಡ್ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಹಾಗೂ ಅಶ್ಲೀಲ ಪದಗಳಿಂದ ನಿಂದಿಸಿ ಸಂದೇಶ ಕಳುಹಿಸಿದ್ದ ಪ್ರಕರಣದ ವಿಚಾರಣೆ ಬೆಂಗಳೂರಿನ 46ನೇ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ನಡೆಯುತ್ತಿದೆ. ವಿಚಾರಣೆಗೆ ನ್ಯಾಯಾಲಯಕ್ಕೆ ಆಗಮಿಸಿದ್ದ ರಮ್ಯಾ ಅವರ ಬಳಿ ಆರೋಪಿಗಳು ಹಾಗೂ ಅವರ ಕುಟುಂಬಸ್ಥರು ಕಣ್ಣೀರಿಟ್ಟು ಕ್ಷಮೆಯಾಚಿಸಿದ ಘಟನೆ ನಡೆದಿದೆ. ಆದರೆ, ರಮ್ಯಾ ಅವರು ಯಾವುದೇ ಕಾರಣಕ್ಕೂ ಆರೋಪಿಗಳನ್ನು ಕ್ಷಮಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಟ ದರ್ಶನ್ ಅವರ ಅಭಿಮಾನಿಗಳು ಎನ್ನಲಾದ ಆರೋಪಿಗಳು ಕೋರ್ಟ್ ಆವರಣದಲ್ಲಿ ರಮ್ಯಾ ಅವರ ಕಾಲಿಗೆ ಬಿದ್ದು, ‘ಇದೊಂದು ಬಾರಿ ಕ್ಷಮಿಸಿ, ನಮ್ಮಿಂದ ದೊಡ್ಡ ತಪ್ಪಾಗಿದೆ’ ಎಂದು ಮನವಿ ಮಾಡಿಕೊಂಡಿದ್ದಾರೆ. ಕಳೆದ ವಿಚಾರಣೆಯ ಸಂದರ್ಭದಲ್ಲೂ ಆರೋಪಿಗಳು ಪ್ರಕರಣವನ್ನು ವಾಪಸ್ ಪಡೆಯುವಂತೆ ರಮ್ಯಾ ಅವರಿಗೆ ಮನವಿ ಮಾಡಿದ್ದರು ಎನ್ನಲಾಗಿದೆ.
ಈ ಬಾರಿ ಆರೋಪಿಗಳ ಕುಟುಂಬಸ್ಥರೂ ಕೂಡ ರಮ್ಯಾ ಅವರನ್ನು ಭೇಟಿಯಾಗಿ ಪ್ರಕರಣವನ್ನು ಇಲ್ಲಿಗೇ ಮುಕ್ತಾಯಗೊಳಿಸುವಂತೆ ಮನವಿ ಮಾಡಿದ್ದಾರೆ. ಆದರೆ, ಈ ಮನವಿಗೆ ರಮ್ಯಾ ಅವರು ಯಾವುದೇ ರೀತಿಯ ಸಮ್ಮತಿ ಸೂಚಿಸಿಲ್ಲ.
ಸೋಷಿಯಲ್ ಮೀಡಿಯಾದಲ್ಲಿ ಮೊಬೈಲ್ ಮತ್ತು ಇಂಟರ್‌ನೆಟ್ ಇದೆ ಎಂಬ ಕಾರಣಕ್ಕೆ ಯಾರ ವಿರುದ್ಧ ಬೇಕಾದರೂ ಅಶ್ಲೀಲವಾಗಿ ಹಾಗೂ ಅವಾಚ್ಯವಾಗಿ ಕಾಮೆಂಟ್ ಮಾಡಲು ಸಾಧ್ಯವಿಲ್ಲ ಎಂದು ರಮ್ಯಾ ಖಡಕ್ ಆಗಿ ಹೇಳಿದ್ದಾರೆ. ‘ನಾನು ಯಾವುದೇ ಕಾರಣಕ್ಕೂ ಈ ಕೇಸ್ ವಾಪಸ್ ಪಡೆಯುವುದಿಲ್ಲ’ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಸೋಷಿಯಲ್ ಮೀಡಿಯಾ ಟ್ರೋಲ್ ಮತ್ತು ಸೈಬರ್ ದೌರ್ಜನ್ಯದ ವಿರುದ್ಧ ತಮ್ಮ ಕಾನೂನು ಹೋರಾಟವನ್ನು ಮುಂದುವರಿಸುವುದಾಗಿ ರಮ್ಯಾ ತಿಳಿಸಿದ್ದಾರೆ. ನ್ಯಾಯಾಲಯ ಎಷ್ಟು ಬಾರಿ ಸಾಕ್ಷ್ಯ ಹೇಳಲು ಕರೆದರೂ ಹಾಜರಾಗಲು ಸಿದ್ಧವಿರುವುದಾಗಿ ಹೇಳಿರುವ ಅವರು, ಆರೋಪಿಗಳಿಗೆ ಕ್ಷಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಘಟನೆ ಮುಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುವವರಿಗೆ ಪಾಠವಾಗಬೇಕು ಎಂಬುದು ರಮ್ಯಾ ಅವರ ನಿಲುವಾಗಿದೆ. ಮತ್ತೊಬ್ಬ ಮಹಿಳೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಅಥವಾ ಕೆಟ್ಟದಾಗಿ ಕಾಮೆಂಟ್ ಮಾಡುವ ಮುನ್ನ ಯೋಚಿಸುವಂತಾಗಬೇಕು ಎಂದು ಅವರು ಹೇಳಿದ್ದಾರೆ.
ರಮ್ಯಾ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಕೆಟ್ಟ ಹಾಗೂ ಅವಾಚ್ಯ ಪದಗಳಿಂದ ನಿಂದಿಸಿ ಸಂದೇಶಗಳನ್ನು ಕಳುಹಿಸಲಾಗಿತ್ತು. ಈ ಸಂಬಂಧ ರಮ್ಯಾ ಅವರು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಸಿಸಿಬಿ ಪೊಲೀಸರು ತನಿಖೆ ನಡೆಸಿ, ನಿಂದನಾತ್ಮಕ ಸಂದೇಶಗಳನ್ನು ಕಳುಹಿಸಿದ್ದ ಹಲವು ಆರೋಪಿಗಳನ್ನು ಬಂಧಿಸಿದ್ದರು. ಸದ್ಯ ಸಿಸಿಬಿ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದು, ವಿಚಾರಣೆ ಮುಂದುವರಿದಿದೆ.



