ಉಡುಪಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆದ ವಿಟ್ಲಪಿಂಡಿ ಉತ್ಸವದ ವೇಳೆ ಅನಿರೀಕ್ಷಿತ ಅವಘಡವೊಂದು ನಡೆದಿದೆ. ಉತ್ಸವದ ಬಳಿಕ ಚಿನ್ನದ ರಥದಲ್ಲಿ ರಥಾರೂಢವಾಗಿದ್ದ ಕೃಷ್ಣನ ಮಣ್ಣಿನ ಮೂರ್ತಿಯನ್ನು ಕೆಳಗಿಳಿಸುವ ಸಂದರ್ಭದಲ್ಲಿ ಪರ್ಯಾಯ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಗಳ ಕೈಯಿಂದ ಮೂರ್ತಿ ಆಕಸ್ಮಿಕವಾಗಿ ಜಾರಿ ಕೆಳಗೆ ಬಿದ್ದು ಭಗ್ನವಾಗಿದೆ.
ಉಡುಪಿ ಶ್ರೀಕೃಷ್ಣ ಮಠದಲ್ಲಿ ಶ್ರೀಕೃಷ್ಣ ಲೀಲೋತ್ಸವದ ಅಂಗವಾಗಿ ವಿಟ್ಲಪಿಂಡಿ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಚಾತುರ್ಮಾಸದ ಹಿನ್ನೆಲೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಕೃಷ್ಣನ ಮಣ್ಣಿನ ಮೂರ್ತಿಯನ್ನು ಚಿನ್ನದ ರಥದಲ್ಲಿ ರಥಾರೂಢಗೊಳಿಸಿ ರಥಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಉತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.
ರಥೋತ್ಸವ ಪೂರ್ಣಗೊಂಡ ಬಳಿಕ ಕೃಷ್ಣನ ಮಣ್ಣಿನ ಮೂರ್ತಿಯನ್ನು ರಥದಿಂದ ಇಳಿಸಿ ಮಧ್ವ ಸರೋವರದಲ್ಲಿ ವಿಸರ್ಜನೆಗೆ ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ ಪರ್ಯಾಯ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಗಳ ಕೈಯಿಂದ ಮೂರ್ತಿ ಆಕಸ್ಮಿಕವಾಗಿ ಜಾರಿ ಕೆಳಗೆ ಬಿದ್ದಿದೆ.
ಕೆಳಗೆ ಬಿದ್ದ ರಭಸಕ್ಕೆ ಮಣ್ಣಿನಿಂದ ಮಾಡಲಾಗಿದ್ದ ಕೃಷ್ಣನ ಮೂರ್ತಿ ಭಗ್ನವಾಗಿದೆ. ಮೂರ್ತಿ ಕೈಯಿಂದ ಜಾರಿ ಬಿದ್ದ ದೃಶ್ಯವನ್ನು ಕಂಡು ಸ್ಥಳದಲ್ಲಿದ್ದ ಭಕ್ತರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಪ್ರತಿವರ್ಷದಂತೆ ಈ ಬಾರಿಯೂ ಭಕ್ತರ ಸಮ್ಮುಖದಲ್ಲಿ ವಿಟ್ಲಪಿಂಡಿ ಉತ್ಸವವನ್ನು ವೈಭವದಿಂದ ಆಚರಿಸಲಾಗಿತ್ತು. ಆದರೆ ಉತ್ಸವದ ಅಂತಿಮ ಹಂತದಲ್ಲಿ ನಡೆದ ಈ ಅನಿರೀಕ್ಷಿತ ಘಟನೆ ಇದೀಗ ಗಮನ ಸೆಳೆದಿದೆ.



