ನವದೆಹಲಿ: ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡವೊಂದು ಕುಸಿದಿದ್ದು, ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಬಳಿಕ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಈವರೆಗೆ ಆರು ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಅಧಿಕಾರಿಗಳ ಪ್ರಕಾರ, 75 ಹಾಸಿಗೆಗಳ ಪೇಯಿಂಗ್ ಗೆಸ್ಟ್ (PG) ವಸತಿ ಸೌಲಭ್ಯ ಹೊಂದಿದ್ದ ಕಟ್ಟಡ ಮಧ್ಯಾಹ್ನ ಸುಮಾರು 1.30ರ ವೇಳೆಗೆ ಕುಸಿದಿದೆ. ಕಟ್ಟಡ ಕುಸಿದ ಸಂದರ್ಭದಲ್ಲಿ ಕನಿಷ್ಠ 50 ವಿದ್ಯಾರ್ಥಿಗಳು ಒಳಗಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಕುಸಿದ ಕಟ್ಟಡವು ‘ಹಾಸ್ಟೆಲ್ ಡೇಜ್’ ಹೆಸರಿನ ಪುರುಷರ ಪಿಜಿ ವಸತಿ ಎಂದು ತಿಳಿದುಬಂದಿದೆ. ಅವಶೇಷಗಳಡಿ ಇನ್ನೂ ಕೆಲವರು ಸಿಲುಕಿರುವ ಸಾಧ್ಯತೆ ಹಿನ್ನೆಲೆಯಲ್ಲಿ ರಕ್ಷಣಾ ಸಿಬ್ಬಂದಿ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.
ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳ, ಅಂಬುಲೆನ್ಸ್ ಸೇರಿದಂತೆ ವಿವಿಧ ತುರ್ತು ಸೇವೆಗಳ ತಂಡಗಳನ್ನು ನಿಯೋಜಿಸಲಾಗಿದೆ. ಕನಿಷ್ಠ 12 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆಗೆ ನೆರವಾಗುತ್ತಿವೆ.
ಅವಶೇಷಗಳನ್ನು ತೆರವುಗೊಳಿಸಿ ಸಿಲುಕಿರುವವರನ್ನು ಪತ್ತೆಹಚ್ಚಲು ಈಗಾಗಲೇ ಜೆಸಿಬಿ ಯಂತ್ರವನ್ನು ನಿಯೋಜಿಸಲಾಗಿದೆ. ಕಟ್ಟಡದ ಚಪ್ಪಡಿಗಳು ಹಾಗೂ ಗಿರ್ಡರ್ಗಳನ್ನು ತೆರವುಗೊಳಿಸಲು ಹೆಚ್ಚಿನ ಯಂತ್ರೋಪಕರಣಗಳನ್ನು ಸ್ಥಳಕ್ಕೆ ತರಲಾಗುತ್ತಿದೆ. ಅಗ್ನಿಶಾಮಕ ಸಿಬ್ಬಂದಿಗೆ ನೆರವಾಗಲು ವಿಪತ್ತು ಪ್ರತಿಕ್ರಿಯಾ ತಂಡಗಳನ್ನೂ ನಿಯೋಜಿಸಲಾಗಿದೆ.
ಘಟನೆ ಕುರಿತು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತ ಮಾಹಿತಿ ಪಡೆದುಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗತಿಯಲ್ಲಿ ನಡೆಸಿ, ಅವಶೇಷಗಳಡಿ ಸಿಲುಕಿರುವವರನ್ನು ಸುರಕ್ಷಿತವಾಗಿ ಹೊರತೆಗೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಟ್ಟಡ ಕುಸಿತಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಸದ್ಯ ರಕ್ಷಣಾ ಕಾರ್ಯಾಚರಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಅವಶೇಷಗಳಡಿ ಸಿಲುಕಿರುವವರ ಪತ್ತೆಗಾಗಿ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದ್ದಾರೆ.



