ಗದಗ: ತಗಡಿನ ಮನೆಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಕ್ಷಣಾರ್ಧದಲ್ಲೇ ಮನೆ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಶಿವಾಜಿನಗರ ತಾಂಡಾದಲ್ಲಿ ನಡೆದಿದೆ.
ಸಂತೋಷ ಲಮಾಣಿ ಎಂಬುವರಿಗೆ ಸೇರಿದ ಮನೆ ಇದಾಗಿದ್ದು, ಕುಟುಂಬಸ್ಥರೆಲ್ಲರೂ ಎರಡು ದಿನಗಳಿಂದ ಮನೆ ದೇವರಿಗೆ ತೆರಳಿದ್ದರು. ಇಂದು ಬೆಳಗಿನ ಜಾವ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಬೆಂಕಿ ನಂದಿಸಲು ಮುಂದಾಗಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಮನೆ ಸಂಪೂರ್ಣವಾಗಿ ಹೊತ್ತಿ ಉರಿದಿತ್ತು. ಬಳಿಕ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಹರಸಾಹಸಪಟ್ಟು ಬೆಂಕಿ ನಂದಿಸಿದ್ದಾರೆ. ಆದರೆ ಮನೆಯಲ್ಲಿದ್ದ ದವಸ ಧಾನ್ಯಗಳು, ಬಟ್ಟೆ, ಹಣ, ದಾಖಲೆಗಳು ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.
ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನೆ ವಿಷಯ ತಿಳಿದು ಸ್ಥಳಕ್ಕೆ ಬಂದ ಕುಟುಂಬಸ್ಥರು ಸುಟ್ಟು ಕರಕಲಾದ ಮನೆಯನ್ನು ಕಂಡು ಕಣ್ಣೀರಿಟ್ಟಿದ್ದಾರೆ. ಘಟನೆ ಶಿರಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.



