ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಕೂಡ್ಲಿಗಿ ಪಟ್ಟಣದಲ್ಲಿ ನಡೆದ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ರೈತರ ಬಹುದಿನಗಳ ನೀರಾವರಿ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಮರಬ್ಬೀಹಾಳು ಏತ ನೀರಾವರಿ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸುವಂತೆ ಶಾಸಕ ಕೆ. ನೇಮಿರಾಜ್ ನಾಯ್ಕ ಮನವಿ ಸಲ್ಲಿಸಿದರು.
ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮರಬ್ಬೀಹಾಳು ಭಾಗದ ರೈತರ ಬಹುದಿನಗಳ ನೀರಾವರಿ ಬೇಡಿಕೆಯನ್ನು ಪೂರೈಸುವ ದೃಷ್ಟಿಯಿಂದ ಈ ಏತ ನೀರಾವರಿ ಯೋಜನೆ ಅತ್ಯಂತ ಮಹತ್ವದ್ದಾಗಿದೆ. ಯೋಜನೆಯಿಂದ ಸುಮಾರು 850 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವುದರ ಜೊತೆಗೆ ಲಡಕನಬಾವಿ, ವರದಾಪುರ ಹಾಗೂ ಹಂಪಪಟ್ಟಣ ಕೆರೆಗಳಿಗೆ ನೀರು ತುಂಬಿಸುವ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಯೋಜನೆಯಲ್ಲಿ ಪಂಪಿಂಗ್ ವ್ಯವಸ್ಥೆ, ವಿದ್ಯುತ್ ಮೂಲಸೌಕರ್ಯ, ರೈಸಿಂಗ್ ಮೇನ್, ಕಾಲುವೆ ಹಾಗೂ ವಿತರಣಾ ವ್ಯವಸ್ಥೆ ಮತ್ತು ಕೆರೆ ಸುಧಾರಣಾ ಕಾಮಗಾರಿಗಳು ಒಳಗೊಂಡಿವೆ. ಇದರಿಂದ ಕ್ಷೇತ್ರದ ಕೃಷಿ ಅಭಿವೃದ್ಧಿಗೆ ಉತ್ತೇಜನ ದೊರೆಯುವುದರೊಂದಿಗೆ ನೀರಿನ ಸಂಗ್ರಹ ಹಾಗೂ ದೀರ್ಘಕಾಲಿಕ ನೀರಿನ ಭದ್ರತೆಗೆ ಸಹಕಾರಿಯಾಗಲಿದೆ. ಯೋಜನೆಯ ಒಟ್ಟು ಅಂದಾಜು ವೆಚ್ಚ ₹70 ಕೋಟಿ ಆಗಿದೆ.
ಯೋಜನೆಗೆ ಅಗತ್ಯವಿರುವ ನೀರಿನ ಹಂಚಿಕೆಯನ್ನು ತುಂಗಭದ್ರಾ ಮಂಡಳಿ ಈಗಾಗಲೇ ಮಂಜೂರು ಮಾಡಿದ್ದು, ನೀರಿನ ಲಭ್ಯತೆಯೂ ಖಚಿತವಾಗಿದೆ. ಹೀಗಾಗಿ ಹಂಚಿಕೆಯಾಗಿರುವ ನೀರನ್ನು ಸದುಪಯೋಗಪಡಿಸಿಕೊಂಡು ಉದ್ದೇಶಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಮೂಲಸೌಕರ್ಯ ಕಾಮಗಾರಿಗಳನ್ನು ಶೀಘ್ರ ಅನುಷ್ಠಾನಗೊಳಿಸುವ ಅಗತ್ಯವಿದೆ ಎಂದು ಶಾಸಕರು ಮನವಿಯಲ್ಲಿ ತಿಳಿಸಿದ್ದಾರೆ.
ಪ್ರಸ್ತುತ WRD 2024-25 SR ದರಗಳು ಹಾಗೂ ಮಾರ್ಗಸೂಚಿಗಳನ್ವಯ ಡಿಪಿಆರ್ ಪರಿಷ್ಕರಿಸಿ, ಅಗತ್ಯ ತಾಂತ್ರಿಕ ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ರೈತರ ಹಿತಾಸಕ್ತಿ, ಈಗಾಗಲೇ ಲಭ್ಯವಿರುವ ನೀರಿನ ಹಂಚಿಕೆ ಹಾಗೂ ಕ್ಷೇತ್ರದ ನೀರಾವರಿ ಅಗತ್ಯವನ್ನು ಪರಿಗಣಿಸಿ ಪರಿಷ್ಕೃತ ಡಿಪಿಆರ್ಗೆ ಶೀಘ್ರ ಅನುಮೋದನೆ ನೀಡಿ, ಅಗತ್ಯ ಅನುದಾನ ಒದಗಿಸುವ ಮೂಲಕ ಮರಬ್ಬೀಹಾಳು ಏತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ಶಾಸಕ ಕೆ. ನೇಮಿರಾಜ್ ನಾಯ್ಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.



