ವಿಜಯಸಾಕ್ಷಿ ಸುದ್ದಿ, ಗದಗ: ಸಮೀಪದ ಗ್ರಾಮೀಣ ವಿಶ್ವವಿದ್ಯಾಲಯದ ಜನವನದಲ್ಲಿ ಎಲ್ಐಸಿ ವಿಮಾ ಪ್ರತಿನಿಧಿಗಳಿಂದ ಗುರುವಂದನಾ ಕಾರ್ಯಕ್ರಮ ನಡೆಯಿತು. ವಿಶೇಷವೆಂದರೆ, ಎಲ್ಐಸಿ ವಿಮಾ ಪ್ರತಿನಿಧಿಗಳು ತಮ್ಮ ಗುರು ಹಾಗೂ ಮಾರ್ಗದರ್ಶಕರಾದ ಬಿ.ಬಿ. ದೇಶಪಾಂಡೆ ಅವರಿಗೆ ಪ್ರಕೃತಿಯ ಮಡಿಲಿನಲ್ಲಿ ಸರಳವಾಗಿ ಗುರುವಂದನಾ ಕಾರ್ಯಕ್ರಮ ಆಯೋಜಿಸಿ ಸನ್ಮಾನಿಸಿದರು.
ಬಿ.ಬಿ. ದೇಶಪಾಂಡೆ ಅವರು ಸುಮಾರು ನಾಲ್ಕು ದಶಕಗಳ ಕಾಲ ಎಲ್ಐಸಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಹಲವು ವಿಮಾ ಪ್ರತಿನಿಧಿಗಳಿಗೆ ಮಾರ್ಗದರ್ಶನ ನೀಡಿದ್ದರು. ಅವರ ಮಾರ್ಗದರ್ಶನದಲ್ಲಿ ಬೆಳೆದ ಶಿಷ್ಯ ಬಳಗವೇ ಒಗ್ಗೂಡಿ ಈ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ.ಬಿ. ದೇಶಪಾಂಡೆ ಹಾಗೂ ಅವರ ಪತ್ನಿ ಭಾರತಿ ದೇಶಪಾಂಡೆ, ಪ್ರತಿಯೊಬ್ಬರೂ ತಮ್ಮ ತಾಯಿ ಹೆಸರಿನಲ್ಲಿ ಸಸಿ ನೆಟ್ಟು ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು. ಜನವನವು ಉತ್ತಮ ಪರಿಸರ ತಾಣವಾಗಿದ್ದು, ಇಲ್ಲಿ ಸಾರ್ವಜನಿಕರು ಹುಟ್ಟುಹಬ್ಬ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಪ್ರಕೃತಿಯ ನಡುವೆ ಆಚರಿಸಬಹುದು ಎಂದು ಅಭಿಪ್ರಾಯಪಟ್ಟರು. ತಾವು ಕೂಡ ಶೀಘ್ರದಲ್ಲೇ ಜನವನಕ್ಕೆ ಹಲವು ಹಣ್ಣಿನ ಸಸಿಗಳನ್ನು ನೀಡುವುದಾಗಿ ತಿಳಿಸಿದರು.
ಮೌನೇಶ ಭಜಂತ್ರಿ ಮಾತನಾಡಿ, ದೇಶಪಾಂಡೆ ಅವರ ಬಳಿ ಹಲವು ಜನರು ಕಲಿತು ಮಾರ್ಗದರ್ಶನ ಪಡೆದುಕೊಂಡಿದ್ದಾರೆ. ಅವರು ಪ್ರಕೃತಿ ಪ್ರಿಯರಾಗಿರುವುದರಿಂದ ಈ ಗುರುವಂದನಾ ಕಾರ್ಯಕ್ರಮವನ್ನು ಜನವನದಲ್ಲಿ ಆಯೋಜಿಸಲಾಗಿದೆ. ದುಂದು ವೆಚ್ಚ ಮಾಡುವುದು ಬೇಡ ಎಂಬುದು ದೇಶಪಾಂಡೆ ಅವರ ಆಶಯ. ಹೀಗಾಗಿ ಕೇಕ್, ಉಡುಗೊರೆ ಸೇರಿದಂತೆ ದುಂದು ವೆಚ್ಚದ ಆಚರಣೆಗಳನ್ನು ಬದಿಗಿಟ್ಟು, ಪ್ರಕೃತಿಯ ಮಧ್ಯೆ ಸರಳ ರೀತಿಯಲ್ಲಿ ಅವರಿಗೆ ಸನ್ಮಾನ ಮಾಡಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಮೇಶ ಅಣ್ಣಿಗೇರಿ, ವಿನಯ ಶಲವಡಿ, ಸಿದ್ದು ಬಣಗಾರ, ಮಂಜುನಾಥ ಸೊಪ್ಪಿಮಠ, ಶರೀಫಸಾಬ್ ನದಾಫ್, ನಾಮದೇವ ಲಮಾಣಿ, ವಿರೂಪಾಕ್ಷ ಮಳ್ಳಿ, ಪ್ರದೀಪ ಅಂಗಡಿ, ನಿರ್ಮಲಾ ಕದಡಿ, ಕವಿತಾ ಉಪವಾಸಿ, ರೇಖಾ ಕುರಿ, ರೇಖಾ ಸಾತಣ್ಣವರ, ಲಕ್ಷ್ಮೀ ಸೋಮಣ್ಣವರ, ಶ್ರೀದೇವಿ ಕಮ್ಮಾರ, ಸಿಂಧು ಹಡಪದ, ಶೀಲಾ ಚಳ್ಳಮರದ ಸೇರಿದಂತೆ ಇತರರು ಉಪಸ್ಥಿತರಿದ್ದರು.



