ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಗಣೇಶೋತ್ಸವವನ್ನು ಶಾಂತಿ, ಸೌಹಾರ್ದತೆ ಹಾಗೂ ಸಂಭ್ರಮದಿಂದ ಆಚರಿಸುವ ಜತೆಗೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಎಲ್ಲ ಗಣೇಶೋತ್ಸವ ಮಂಡಳಿಗಳು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ನರೇಗಲ್ಲ ಪೊಲೀಸ್ ಠಾಣೆಯ ಪಿಎಸ್ಐ ಐಶ್ವರ್ಯ ನಾಗರಾಳ ಸೂಚಿಸಿದರು.
ಸಮೀಪದ ಜಕ್ಕಲಿ ಗ್ರಾಮದ ಗ್ರಾಮ ಚಾವಡಿಯಲ್ಲಿ ರವಿವಾರ ಸಂಜೆ ನರೇಗಲ್ಲ ಪೊಲೀಸ್ ಠಾಣೆ ವತಿಯಿಂದ ಆಯೋಜಿಸಿದ್ದ ಗಣೇಶೋತ್ಸವದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗಣೇಶೋತ್ಸವ ಎಲ್ಲರ ಹಬ್ಬ. ಹಬ್ಬಕ್ಕೆ ಅಡ್ಡಿಪಡಿಸುವುದು ಪೊಲೀಸರ ಉದ್ದೇಶವಲ್ಲ. ಎಲ್ಲರೂ ಸುರಕ್ಷಿತವಾಗಿ ಹಾಗೂ ನೆಮ್ಮದಿಯಿಂದ ಹಬ್ಬ ಆಚರಿಸುವಂತಾಗಬೇಕು. ಆದ್ದರಿಂದ ಗಣೇಶೋತ್ಸವ ಮಂಡಳಿಗಳು ಹೆಚ್ಚಿನ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದರು.
ಡಿಜೆ ಬಳಕೆಗೆ ಸಂಪೂರ್ಣ ನಿಷೇಧವಿದ್ದು, ಈಗಾಗಲೇ ಡಿಜೆ ಕಾಯ್ದಿರಿಸಿದ್ದರೆ ಅದನ್ನು ರದ್ದುಪಡಿಸಿ ಹಣವನ್ನು ವಾಪಸ್ ಪಡೆಯುವಂತೆ ಸಲಹೆ ನೀಡಿದರು. ಡಿಜೆಗಾಗಿ ಖರ್ಚು ಮಾಡುವ ಹಣವನ್ನು ಭಜನಾ ತಂಡಗಳು, ಕಲಾವಿದರು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಳಸಿದರೆ ಸ್ಥಳೀಯ ಕಲಾವಿದರ ಕುಟುಂಬಗಳಿಗೆ ನೆರವಾಗಲಿದೆ ಎಂದು ಹೇಳಿದರು.
ಗಣಪತಿ ಪ್ರತಿಷ್ಠಾಪನೆಗೂ ಮುನ್ನ ಪೊಲೀಸ್ ಇಲಾಖೆ, ಗ್ರಾಮ ಪಂಚಾಯಿತಿ ಹಾಗೂ ವಿದ್ಯುತ್ ವ್ಯವಸ್ಥೆಗೆ ಹೆಸ್ಕಾಂನಿಂದ ಅಗತ್ಯ ಅನುಮತಿ ಪಡೆಯುವುದು ಕಡ್ಡಾಯ. ಅನುಮತಿ ಇಲ್ಲದೆ ಗಣಪತಿ ಪ್ರತಿಷ್ಠಾಪಿಸಿದರೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲು ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಸಿದರು.
ಗಣಪತಿ ಮೂರ್ತಿಯನ್ನು ರಸ್ತೆ ಅಥವಾ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗುವಂತೆ ಪ್ರತಿಷ್ಠಾಪಿಸಬಾರದು. ಮಂಟಪಗಳಲ್ಲಿ ರಾತ್ರಿ ವೇಳೆ ಸಮರ್ಪಕ ಬೆಳಕಿನ ವ್ಯವಸ್ಥೆ ಮಾಡಬೇಕು ಹಾಗೂ ಸಮಿತಿಯ ಸದಸ್ಯರು ಸ್ಥಳದಲ್ಲಿರುವಂತೆ ಸೂಚಿಸಿದರು.
ಮಂಟಪಗಳಲ್ಲಿ ಇಸ್ಪೀಟ್ ಸೇರಿದಂತೆ ಯಾವುದೇ ರೀತಿಯ ಜೂಜಾಟ, ಅಕ್ರಮ ಚಟುವಟಿಕೆ, ಮದ್ಯಪಾನ ಮಾಡಿ ಗಲಾಟೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಕೃತ್ಯಗಳಿಗೆ ಅವಕಾಶವಿಲ್ಲ. ಇಂತಹ ಘಟನೆಗಳು ನಡೆದರೆ ಮೊದಲು ಗಣೇಶೋತ್ಸವ ಸಮಿತಿಯ ಸದಸ್ಯರನ್ನೇ ಹೊಣೆಗಾರರನ್ನಾಗಿ ಮಾಡಿ, ನಂತರ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿಯೊಂದಿಗೆ ಯಾರೂ ಅಸಭ್ಯವಾಗಿ ಅಥವಾ ಅನುಚಿತವಾಗಿ ವರ್ತಿಸಬಾರದು. ಅಂತಹ ಪ್ರಕರಣಗಳಲ್ಲಿ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಧ್ವನಿವರ್ಧಕ ಬಳಕೆಯಲ್ಲಿಯೂ ನಿಗದಿತ ನಿಯಮಗಳನ್ನು ಪಾಲಿಸಬೇಕು. ರಾತ್ರಿ 10 ಗಂಟೆಯೊಳಗೆ ಕಾರ್ಯಕ್ರಮಗಳನ್ನು ಮುಕ್ತಾಯಗೊಳಿಸಬೇಕು. ನಿಯಮ ಉಲ್ಲಂಘಿಸಿ ಡಿಜೆ ಅಥವಾ ಧ್ವನಿವರ್ಧಕ ಬಳಸಿದರೆ ಉಪಕರಣಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಎಚ್ಚರಿಸಿದರು.
ಹಬ್ಬ ಎಂದರೆ ಪೂಜೆ, ಭಕ್ತಿ, ಸಂಸ್ಕೃತಿ ಮತ್ತು ಸೌಹಾರ್ದತೆ. ಕುಡಿದು ಬಂದು ಗಲಾಟೆ ಮಾಡುವುದು ಅಥವಾ ರಾತ್ರಿ ತಡವರೆಗೆ ಅಶಿಸ್ತಿನಿಂದ ವರ್ತಿಸುವುದು ನಮ್ಮ ಸಂಸ್ಕೃತಿಯಲ್ಲ. ಎಲ್ಲರೂ ಪರಂಪರೆಯನ್ನು ಗೌರವಿಸಿ ಶಾಂತಿಯುತವಾಗಿ ಹಬ್ಬ ಆಚರಿಸೋಣ ಎಂದು ಕರೆ ನೀಡಿದರು.
ಸಭೆಯಲ್ಲಿ ಅಶೋಕಪ್ಪ ಯಾವಗಲ್ಲ, ವೀರಯ್ಯ ಹಿರೇಮಠ, ಶರಣಪ್ಪ ಕುರಡಗಿ, ಚನ್ನಬಸವ ಅರಹುಣಸಿ, ಸಂಗಮೇಶ ಮೆಣಸಗಿ, ಮುತ್ತು ಮೇಟಿ ಸೇರಿದಂತೆ ವಿವಿಧ ಗಣೇಶೋತ್ಸವ ಮಂಡಳಿಗಳ ಮುಖಂಡರು, ಯುವಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ನರೇಗಲ್ಲ ಠಾಣೆಯ ಹವಾಲ್ದಾರ ಪುಂಡಲೀಕಪ್ಪ ದಾಸರ, ಪೊಲೀಸ್ ಪೇದೆಗಳಾದ ಕಿರಣಕುಮಾರ ವಿ. ಹಿರೇಮಠ, ಸಂತೋಷ ಘಾಟಿಗೆ ಭಾಗವಹಿಸಿದ್ದರು. ಪೇದೆ ಚಂದ್ರು ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿದರು. ಶಿವರಾಜ ಮುಗಳಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದರು.
ಪೊಲೀಸ್ ಇಲಾಖೆ ಜನರ ರಕ್ಷಣೆಗೆ ಸದಾ ಸಿದ್ಧವಿದೆ. ಯಾವುದೇ ಸಮಸ್ಯೆ ಎದುರಾದರೆ ಸ್ಥಳೀಯ ಪೊಲೀಸ್ ಸಿಬ್ಬಂದಿಯನ್ನು ಸಂಪರ್ಕಿಸಿ. ನಾವು ನಿಮ್ಮ ವಿರುದ್ಧ ಇರುವವರಲ್ಲ; ನಿಮ್ಮ ಸಹಕಾರದಿಂದ ಹಬ್ಬ ಉತ್ತಮವಾಗಿ ನಡೆದರೆ ನಮಗೂ ಸಂತೋಷ.
— ಐಶ್ವರ್ಯ ನಾಗರಾಳ, ಪಿಎಸ್ಐ, ನರೇಗಲ್ಲ ಠಾಣೆ



