ಬೆಂಗಳೂರು: ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿದ ಜಾಗದ ವಿಚಾರವಾಗಿ ವಕೀಲ ಪುಟ್ಟಭೈರೇಗೌಡ ಅವರ ಮೇಲೆ 30ರಿಂದ 40 ಮಂದಿ ಗುಂಪು ಕಟ್ಟಿಕೊಂಡು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ತಮ್ಮದೇ ಜಾಗದಲ್ಲಿ ಅಭಿವೃದ್ಧಿ ಕೆಲಸಕ್ಕಾಗಿ ನಿರ್ಮಿಸಲಾಗಿದ್ದ ಶೆಡ್ ಪರಿಶೀಲಿಸಲು ಪುಟ್ಟಭೈರೇಗೌಡ ತೆರಳಿದ್ದ ವೇಳೆ ಗುಂಪೊಂದು ಅವರನ್ನು ಸುತ್ತುವರೆದಿದೆ ಎನ್ನಲಾಗಿದೆ. ಈ ವೇಳೆ ಅವರು ಶೆಡ್ನೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಆದರೆ ಶೆಡ್ನ ಬಾಗಿಲು ಒಡೆದು ಅವರನ್ನು ಹೊರಗೆ ಎಳೆದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಸ್ಥಳೀಯ ಬಿಜೆಪಿ ಕಾರ್ಯಕರ್ತ ಅನಿಲ್ ಹಾಗೂ ಅವರ ಸಹಚರರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಹಿಳೆಯರನ್ನು ಮುಂದೆ ಬಿಟ್ಟು ಹಲ್ಲೆ ಮಾಡಿಸಲಾಗಿದೆ ಹಾಗೂ ಆದಷ್ಟು ಬೇಗ ಜಾಗ ಖಾಲಿ ಮಾಡುವಂತೆ ಬೆದರಿಕೆ ಹಾಕಲಾಗಿದೆ ಎಂದು ದೂರಲಾಗಿದೆ.
ಇನ್ನು ಜಾಗದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾ ಕೆಲಸ ಮಾಡುತ್ತಿರಲಿಲ್ಲ ಎನ್ನಲಾಗಿದ್ದು, ಅಭಿವೃದ್ಧಿ ಕೆಲಸಕ್ಕಾಗಿ ಶೆಡ್ ನಿರ್ಮಿಸಲಾಗಿತ್ತು ಎಂದು ತಿಳಿದುಬಂದಿದೆ.
ಈ ಸಂಬಂಧ ಪುಟ್ಟಭೈರೇಗೌಡ ಅವರ ಸ್ನೇಹಿತ ಹುಳಿಮಾವು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಿವಿಲ್ ವ್ಯಾಜ್ಯದ ಜಾಗದ ವಿಚಾರವೇ ಹಲ್ಲೆಗೆ ಕಾರಣ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



