ಬೆಂಗಳೂರು: ನಗರದ ಪಟ್ಟಂದೂರು ಅಗ್ರಹಾರ ಮುಖ್ಯ ರಸ್ತೆಯಲ್ಲಿ ಪೌರಕಾರ್ಮಿಕನ ಮೇಲೆ ಯುವತಿಯೊಬ್ಬಳು ಕಲ್ಲು ಎಸೆದಿರುವ ಘಟನೆ ನಡೆದಿದೆ.
ಕೇರಳ ಮೂಲದ ವೈದೇಹಿ ಎಂಬ ಯುವತಿ ತನ್ನ ಗೆಳೆಯನೊಂದಿಗೆ ರಸ್ತೆ ಬದಿಯಲ್ಲಿ ಟೀ ಕುಡಿಯುತ್ತಿದ್ದರು. ಈ ವೇಳೆ ಟೀ ಕುಡಿದ ಕಪ್ ಅನ್ನು ರಸ್ತೆ ಬದಿಗೆ ಎಸೆಯದೆ, ಕಸದ ಬುಟ್ಟಿಗೆ ಹಾಕುವಂತೆ ಪೌರಕಾರ್ಮಿಕರು ಸೂಚಿಸಿದ್ದಾರೆ ಎನ್ನಲಾಗಿದೆ.
ಇದರಿಂದ ಆಕ್ರೋಶಗೊಂಡ ಯುವತಿ ಪೌರಕಾರ್ಮಿಕನ ಮೇಲೆ ಕಲ್ಲು ಎಸೆದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ ಹಾಗೂ ಕೈ ಸನ್ನೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.
ಘಟನೆ ವೇಳೆ ಯುವತಿ ನಶೆಯಲ್ಲಿದ್ದಳು ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ಈ ಸಂಬಂಧ ಪೌರಕಾರ್ಮಿಕ ನೀಡಿದ ದೂರಿನ ಮೇರೆಗೆ ವೈಟ್‌ಫೀಲ್ಡ್ ಪೊಲೀಸರು ಯುವಕ ಹಾಗೂ ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದು, ತನಿಖೆಯ ಬಳಿಕ ಹೆಚ್ಚಿನ ವಿವರಗಳು ತಿಳಿದುಬರಬೇಕಿದೆ.



