ಬೆಂಗಳೂರು: ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಊರುಗಳಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಬಸ್ಗಳ ವ್ಯವಸ್ಥೆ ಮಾಡಿದೆ.
ಪ್ರಯಾಣಿಕರ ದಟ್ಟಣೆ ಗಮನದಲ್ಲಿಟ್ಟುಕೊಂಡು ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಗೆ 2,400 ವಿಶೇಷ ಬಸ್ಗಳನ್ನು ಕಾರ್ಯಾಚರಣೆಗೆ ಸಿದ್ಧಪಡಿಸಲಾಗಿದೆ. ಇದರ ಜೊತೆಗೆ 270 ರಿಸರ್ವೇಶನ್ ಬಸ್ಗಳನ್ನು ನಿಯೋಜಿಸಲಾಗಿದ್ದು, ಬೆಂಗಳೂರಿನಲ್ಲಿ 240 ಬಿಎಂಟಿಸಿ ಬಸ್ಗಳನ್ನು ಹೆಚ್ಚುವರಿ ಸೇವೆಗೆ ಸಿದ್ಧವಾಗಿರಿಸಲಾಗಿದೆ.
ಸೆಪ್ಟೆಂಬರ್ 11ರಿಂದ 13ರವರೆಗೆ ಬೆಂಗಳೂರಿನಿಂದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಗೆ ವಿಶೇಷ ಬಸ್ಗಳು ಸಂಚರಿಸಲಿವೆ. ಮೆಜೆಸ್ಟಿಕ್, ಸ್ಯಾಟಲೈಟ್ ಬಸ್ ನಿಲ್ದಾಣ ಹಾಗೂ ಶಾಂತಿನಗರ ಬಸ್ ನಿಲ್ದಾಣಗಳಿಂದ ಹೆಚ್ಚುವರಿ ಸೇವೆಗಳನ್ನು ನಿರ್ವಹಿಸಲಾಗುತ್ತದೆ.
ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ, ಬೆಳಗಾವಿ, ವಿಜಯಪುರ, ಕಲಬುರಗಿ ಸೇರಿದಂತೆ ಪ್ರಯಾಣಿಕರ ಬೇಡಿಕೆ ಹೆಚ್ಚಿರುವ ಪ್ರಮುಖ ಮಾರ್ಗಗಳಿಗೆ ಹೆಚ್ಚುವರಿ ಬಸ್ಗಳನ್ನು ನಿಯೋಜಿಸಲಾಗಿದೆ.
ಹಬ್ಬದ ಹಿನ್ನೆಲೆಯಲ್ಲಿ ಈಗಾಗಲೇ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ. ಸ್ವಂತ ಊರುಗಳಿಗೆ ತೆರಳಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಬಸ್ ನಿಲ್ದಾಣಗಳತ್ತ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ತೊಂದರೆಯಾಗದಂತೆ KSRTC ಹೆಚ್ಚುವರಿ ಬಸ್ಗಳ ವ್ಯವಸ್ಥೆ ಮಾಡಿದೆ.
ಇನ್ನು ಹಬ್ಬ ಮುಗಿದ ಬಳಿಕ ಬೆಂಗಳೂರಿಗೆ ವಾಪಸ್ ಆಗುವ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 14ರಿಂದ ಬೆಂಗಳೂರಿಗೆ ಮರಳುವ ಪ್ರಯಾಣಿಕರಿಗಾಗಿ ಕೂಡ ಹೆಚ್ಚುವರಿ ಬಸ್ಗಳ ವ್ಯವಸ್ಥೆ ಮಾಡಲಾಗಿದೆ.



