ಆನೇಕಲ್: ಮೊಬೈಲ್ ಬಳಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಮಾಹಿತಿ ಹೊರಬಿದ್ದಿದೆ. ಅವರ ಸಹಕೈದಿಯ ಸೆಲ್‌ನಲ್ಲಿ ಪತ್ತೆಯಾಗಿದ್ದ ಪೆನ್‌ಡ್ರೈವ್‌ನಲ್ಲಿ ಸುಮಾರು 100 ಅಶ್ಲೀಲ ವಿಡಿಯೋಗಳು ಇರುವುದು ಎಫ್‌ಎಸ್‌ಎಲ್ ವರದಿಯಲ್ಲಿ ದೃಢಪಟ್ಟಿದೆ ಎನ್ನಲಾಗಿದೆ.
ತನಿಖೆಯ ಪ್ರಕಾರ, ಕೈದಿಗಳ ಬ್ಯಾರಕ್‌ನಲ್ಲಿ ಅಳವಡಿಸಲಾಗಿದ್ದ ಟಿವಿಗೆ ಪೆನ್‌ಡ್ರೈವ್ ಸಂಪರ್ಕಿಸಿ ಈ ವಿಡಿಯೋಗಳನ್ನು ವೀಕ್ಷಿಸಲಾಗಿತ್ತು ಎನ್ನಲಾಗಿದೆ. ಈ ಕುರಿತು ಪೊಲೀಸರು ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ.
ಪೆನ್‌ಡ್ರೈವ್ ಹಾಗೂ ಮೊಬೈಲ್‌ನಲ್ಲಿದ್ದ ಒಟ್ಟು 173 ಫೈಲ್‌ಗಳನ್ನು ಪರಿಶೀಲಿಸಲಾಗಿದೆ. ಈ ಪೈಕಿ ಮೊಬೈಲ್‌ನಲ್ಲಿ ಚಲನಚಿತ್ರಗಳು ಮತ್ತು ವೆಬ್ ಸೀರೀಸ್‌ಗಳು ಮಾತ್ರ ಪತ್ತೆಯಾಗಿವೆ. ಆದರೆ ಪೆನ್‌ಡ್ರೈವ್‌ನಲ್ಲಿ ಸುಮಾರು 100 ಅಶ್ಲೀಲ ವಿಡಿಯೋಗಳು ಇರುವುದು ಎಫ್‌ಎಸ್‌ಎಲ್ ಪರೀಕ್ಷೆಯಲ್ಲಿ ತಿಳಿದುಬಂದಿದೆ.
ಆದರೆ ಈ ಪೆನ್‌ಡ್ರೈವ್ ಅನ್ನು ಯಾವ ಸಮಯದಲ್ಲಿ ಬಳಸಲಾಗಿತ್ತು ಎಂಬುದನ್ನು ಇನ್ನೂ ಖಚಿತಪಡಿಸಿಕೊಳ್ಳಬೇಕಿದೆ. ಹೀಗಾಗಿ ಬಳಕೆಯ ಸಮಯ ಹಾಗೂ ಇತರ ತಾಂತ್ರಿಕ ವಿವರಗಳನ್ನು ಪತ್ತೆಹಚ್ಚಲು ಪೊಲೀಸರು ಮತ್ತೆ ಎಫ್‌ಎಸ್‌ಎಲ್ ತಜ್ಞರ ನೆರವು ಕೋರಿದ್ದಾರೆ.
ಸಿಸಿಬಿ ದಾಳಿ ವೇಳೆ ಮೊಬೈಲ್, ಪೆನ್‌ಡ್ರೈವ್ ಪತ್ತೆ
ಕಳೆದ ತಿಂಗಳು ಆಗಸ್ಟ್ 11ರಂದು ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿಢೀರ್ ದಾಳಿ ನಡೆಸಿದ್ದರು. ಈ ವೇಳೆ ಪ್ರಜ್ವಲ್ ರೇವಣ್ಣ ಅವರ ಸಹಕೈದಿ ಪ್ರತಾಪ್ ರಾಯ್ ಅವರ ಸೆಲ್‌ನಲ್ಲಿ ಮೊಬೈಲ್ ಫೋನ್ ಹಾಗೂ ಪೆನ್‌ಡ್ರೈವ್ ಪತ್ತೆಯಾಗಿದ್ದವು.
ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಜಪ್ತಿ ಮಾಡಿದ್ದ ಮೊಬೈಲ್ ಹಾಗೂ ಪೆನ್‌ಡ್ರೈವ್‌ಗಳನ್ನು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಎಫ್‌ಎಸ್‌ಎಲ್ ವರದಿಯಲ್ಲಿ ಪೆನ್‌ಡ್ರೈವ್‌ನಲ್ಲಿದ್ದ ಅಶ್ಲೀಲ ವಿಡಿಯೋಗಳ ಮಾಹಿತಿ ಬಹಿರಂಗವಾಗಿದ್ದು, ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ.



