ಮಂಡ್ಯ: ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಟೀ ಸ್ಟಾಲ್ನಲ್ಲಿ ಬೆಂಕಿ ಹೊತ್ತಿಕೊಂಡು ₹20 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟುಹೋಗಿರುವ ಘಟನೆ ನಗರದ ಅಶೋಕ ನಗರದಲ್ಲಿ ನಡೆದಿದೆ. ಮುಂಜಾನೆ 4.45ರ ಸುಮಾರಿಗೆ ಸಂಭವಿಸಿದ ಸ್ಫೋಟದಿಂದ ಪಕ್ಕದ ಟೈಲ್ಸ್ ಅಂಗಡಿಗೂ ಬೆಂಕಿ ವ್ಯಾಪಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.
ರಾತ್ರಿ ಅಂಗಡಿ ಮುಚ್ಚುವ ವೇಳೆ ಸಿಲಿಂಡರ್ ವಾಲ್ವ್ ಆಫ್ ಮಾಡದೆ ಬಿಟ್ಟಿರಬಹುದು ಎಂದು ಶಂಕಿಸಲಾಗಿದ್ದು, ರಾತ್ರಿಯಿಡೀ ಗ್ಯಾಸ್ ಸೋರಿಕೆಯಾಗಿರುವ ಸಾಧ್ಯತೆ ಇದೆ. ಮುಂಜಾನೆ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದ್ದು, ಸ್ಫೋಟದ ತೀವ್ರತೆಗೆ ಟೀ ಸ್ಟಾಲ್ನಲ್ಲಿದ್ದ ಹಲವು ವಸ್ತುಗಳು ಬೆಂಕಿಗಾಹುತಿಯಾಗಿವೆ.
ಘಟನೆ ಗಮನಕ್ಕೆ ಬರುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಿಸಿದ್ದಾರೆ. ಬೆಂಕಿ ಪಕ್ಕದ ಟೈಲ್ಸ್ ಅಂಗಡಿಗೂ ವ್ಯಾಪಿಸಿದ್ದರಿಂದ ಹೆಚ್ಚಿನ ಹಾನಿಯಾಗುವ ಮುನ್ನವೇ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಲಿಂಡರ್ ಸ್ಫೋಟದಿಂದ ಟೀ ಸ್ಟಾಲ್ನ 3 ಫ್ರೀಜರ್ಗಳು, ಡಬಲ್ ಸ್ಟೋರ್ ಫ್ರೀಜರ್, 15 ಟೇಬಲ್ಗಳು, 15 ಚೇರ್ಗಳು, ಫ್ಯಾನ್ಗಳು, ಅಡುಗೆ ಸಾಮಗ್ರಿಗಳು, ಯುಪಿಎಸ್ ಹಾಗೂ ಕಂಪ್ಯೂಟರ್ಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ಘಟನೆಯಿಂದ ₹20 ಲಕ್ಷಕ್ಕೂ ಅಧಿಕ ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.
ಮುಂಜಾನೆ ವೇಳೆ ಘಟನೆ ಸಂಭವಿಸಿದ್ದರಿಂದ ಜನಸಂಚಾರ ಕಡಿಮೆ ಇದ್ದು, ದೊಡ್ಡ ಪ್ರಮಾಣದ ಪ್ರಾಣಾಪಾಯ ತಪ್ಪಿದೆ. ಘಟನೆ ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.



