ಗಣೇಶ ಹಬ್ಬ ಬಂತೆಂದರೆ ಸಾಕು, ಎಲ್ಲೆಡೆ ಸಿಹಿ ಮೋದಕದ ಸಡಗರ. ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ಗಣೇಶ ಚತುರ್ಥಿಯ ಸಂಭ್ರಮಕ್ಕೆ ಮೋದಕದ ಜೊತೆಗೆ ಅಲ್ಲಿನ ಸಾಂಪ್ರದಾಯಿಕ ನೈವೇದ್ಯಗಳಿಗೂ ವಿಶೇಷ ಸ್ಥಾನವಿದೆ.
ಗಣಪತಿಗೆ ಪ್ರಿಯವೆಂದು ಭಾವಿಸಲಾಗುವ ಕಡುಬು, ಚೌತಿ ಉಂಡೆ ಹಾಗೂ ಹೂರಣದ ಕಡುಬುಗಳು ಹಬ್ಬದ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಮನೆಮನೆಗಳಲ್ಲಿ ಸಿದ್ಧವಾಗುತ್ತವೆ. ಅದರಲ್ಲೂ ಗರಿಗರಿಯಾದ ಹುರಿದ ಗೋಧಿ ಹಿಟ್ಟಿನ ಕಡುಬು ಹಾಗೂ ಶೇಂಗಾ-ಹುರಿಗಡಲೆ ಚೌತಿ ಉಂಡೆ ಪ್ರಮುಖ ನೈವೇದ್ಯಗಳಾಗಿವೆ.
ಉತ್ತರ ಕರ್ನಾಟಕ ಶೈಲಿಯ ಹುರಿದ ಗೋಧಿ ಹಿಟ್ಟಿನ ಕಡುಬು:
ಗಣೇಶನಿಗೆ ಗರಿಗರಿಯಾದ ಹುರಿದ ಕಡುಬು ಅರ್ಪಿಸುವುದು ಉತ್ತರ ಕರ್ನಾಟಕದ ಹಲವು ಮನೆಗಳಲ್ಲಿ ನಡೆದುಬಂದಿರುವ ಸಂಪ್ರದಾಯ. ಇದನ್ನು ಗೋಧಿ ಹಿಟ್ಟು ಅಥವಾ ಚಿರೋಟಿ ರವೆಯಿಂದ ತಯಾರಿಸಬಹುದು.
ಬೇಕಾಗುವ ಸಾಮಗ್ರಿಗಳು:
ಗೋಧಿ ಹಿಟ್ಟು ಅಥವಾ ಚಿರೋಟಿ ರವೆ, ಬೆಲ್ಲ, ಹಸಿ ಕೊಬ್ಬರಿ ತುರಿ, ಹುರಿದ ಗಸಗಸೆ, ಏಲಕ್ಕಿ ಪುಡಿ ಹಾಗೂ ಎಣ್ಣೆ ಅಥವಾ ತುಪ್ಪ.
ಮಾಡುವ ವಿಧಾನ:
ಮೊದಲು ಬಾಣಲೆಯಲ್ಲಿ ಹಸಿ ಕೊಬ್ಬರಿ ತುರಿ ಹಾಗೂ ಪುಡಿಮಾಡಿದ ಬೆಲ್ಲವನ್ನು ಹಾಕಿ ಕಡಿಮೆ ಉರಿಯಲ್ಲಿ ಬೆಲ್ಲ ಕರಗುವವರೆಗೆ ಹುರಿದುಕೊಳ್ಳಬೇಕು. ಬಳಿಕ ಹುರಿದ ಗಸಗಸೆ ಹಾಗೂ ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದರೆ ಹೂರಣ ಸಿದ್ಧವಾಗುತ್ತದೆ.
ಇನ್ನೊಂದೆಡೆ ಗೋಧಿ ಹಿಟ್ಟಿಗೆ ಚಿಟಿಕೆ ಉಪ್ಪು ಹಾಗೂ ಸ್ವಲ್ಪ ಕಾದ ಎಣ್ಣೆ ಸೇರಿಸಿ, ಅಗತ್ಯವಿರುವಷ್ಟು ನೀರು ಹಾಕಿ ಗಟ್ಟಿಯಾಗಿ ನಾದಿಕೊಳ್ಳಬೇಕು.
ನಂತರ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿಕೊಂಡು ಪೂರಿಯಂತೆ ಲಟ್ಟಿಸಬೇಕು. ಮಧ್ಯದಲ್ಲಿ ಸಿದ್ಧಪಡಿಸಿದ ಹೂರಣವನ್ನು ತುಂಬಿ ಅರ್ಧಚಂದ್ರಾಕಾರವಾಗಿ ಮಡಚಿ, ಅಂಚುಗಳನ್ನು ಚೆನ್ನಾಗಿ ಕೂಡಿಸಿಕೊಳ್ಳಬೇಕು.
ಕಾದ ಎಣ್ಣೆಯಲ್ಲಿ ಕಡುಬುಗಳನ್ನು ಹೊಂಬಣ್ಣ ಬರುವವರೆಗೆ ಕರಿದರೆ ಗರಿಗರಿಯಾದ ರುಚಿಕರವಾದ ಕಡುಬು ಸವಿಯಲು ಸಿದ್ಧ.
ಶೇಂಗಾ-ಹುರಿಗಡಲೆ ಚೌತಿ ಉಂಡೆ:
ಗಣೇಶ ಚತುರ್ಥಿಯ ಸಂದರ್ಭದಲ್ಲಿ ಉತ್ತರ ಕರ್ನಾಟಕದಲ್ಲಿ ತಯಾರಿಸುವ ಮತ್ತೊಂದು ವಿಶೇಷ ನೈವೇದ್ಯವೆಂದರೆ ಶೇಂಗಾ-ಹುರಿಗಡಲೆ ಚೌತಿ ಉಂಡೆ. ಸರಳವಾಗಿ ತಯಾರಿಸಬಹುದಾದ ಈ ಉಂಡೆ ರುಚಿಕರವಾಗಿದ್ದು, ಹಬ್ಬದ ಪ್ರಸಾದವಾಗಿಯೂ ಬಳಸಲಾಗುತ್ತದೆ.
ಬೇಕಾಗುವ ಸಾಮಗ್ರಿಗಳು:
ಹುರಿದ ಶೇಂಗಾ, ಹುರಿಗಡಲೆ ಅಥವಾ ಪುಠಾಣಿ, ಬೆಲ್ಲದ ಪುಡಿ, ತುಪ್ಪ ಹಾಗೂ ಏಲಕ್ಕಿ ಪುಡಿ.
ಮಾಡುವ ವಿಧಾನ:
ಮೊದಲು ಹುರಿದ ಶೇಂಗಾದ ಸಿಪ್ಪೆ ತೆಗೆದು, ಹುರಿಗಡಲೆಯೊಂದಿಗೆ ಮಿಕ್ಸಿ ಜಾರಿಗೆ ಹಾಕಿ ತರಿತರಿಯಾಗಿ ಪುಡಿಮಾಡಿಕೊಳ್ಳಬೇಕು.
ನಂತರ ಅದೇ ಜಾರಿಗೆ ಪುಡಿಮಾಡಿದ ಬೆಲ್ಲ ಹಾಗೂ ಏಲಕ್ಕಿ ಪುಡಿ ಸೇರಿಸಿ ಮತ್ತೊಮ್ಮೆ ಮಿಶ್ರಣ ಮಾಡಿಕೊಳ್ಳಬೇಕು. ಈ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ, ಬಿಸಿ ಮಾಡಿದ ತುಪ್ಪವನ್ನು ಸ್ವಲ್ಪಸ್ವಲ್ಪವಾಗಿ ಸೇರಿಸುತ್ತಾ ಚೆನ್ನಾಗಿ ಕಲಸಬೇಕು.
ಮಿಶ್ರಣ ಒಂದಾಗುತ್ತಿದ್ದಂತೆ ಕೈಯಲ್ಲಿ ಸಣ್ಣ ಸಣ್ಣ ಉಂಡೆಗಳನ್ನಾಗಿ ಕಟ್ಟಿದರೆ ರುಚಿಕರವಾದ ಚೌತಿ ಉಂಡೆ ಸಿದ್ಧ.
ಹೀಗೆ ಗಣೇಶ ಹಬ್ಬದಂದು ಉತ್ತರ ಕರ್ನಾಟಕದ ಮನೆಗಳಲ್ಲಿ ಸಾಂಪ್ರದಾಯಿಕ ನೈವೇದ್ಯಗಳನ್ನು ತಯಾರಿಸಿ ಗಣೇಶನಿಗೆ ಭಕ್ತಿಯಿಂದ ಅರ್ಪಿಸುವ ಪದ್ಧತಿ ತಲೆಮಾರುಗಳಿಂದ ನಡೆದುಕೊಂಡು ಬಂದಿದೆ. ಹಬ್ಬದ ಸಂಭ್ರಮದ ಜೊತೆಗೆ ಈ ಸಾಂಪ್ರದಾಯಿಕ ತಿನಿಸುಗಳು ಕೂಡ ಗಣೇಶ ಚತುರ್ಥಿಯ ವಿಶೇಷತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ.



