ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ.
ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು, ತರಕಾರಿ, ದಿನಸಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿ ಜೋರಾಗಿದೆ. ಆದರೆ ಹಬ್ಬದ ಸಂಭ್ರಮದಲ್ಲಿರುವ ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.
ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಹೂವು ಹಾಗೂ ತೋರಣಗಳ ಬೆಲೆಯಲ್ಲಿ ಏರಿಕೆಯಾಗಿದೆ. ಇದರ ಜೊತೆಗೆ ಹಬ್ಬದ ಪೂಜೆಗೆ ಅಗತ್ಯವಿರುವ ಹಣ್ಣು, ತರಕಾರಿ ಹಾಗೂ ದಿನಸಿ ವಸ್ತುಗಳ ದರದಲ್ಲೂ ವ್ಯತ್ಯಾಸ ಕಂಡುಬಂದಿದೆ.
ಸೇವಂತಿಗೆ ಹೂವು ಕೆ.ಜಿ.ಗೆ 350 ರೂ. ಇದ್ದರೆ, ಗುಲಾಬಿ ಹೂವು ಕೆ.ಜಿ.ಗೆ 350 ರೂ. ಇದೆ. ಮಿಕ್ಸ್ ಹೂವಿನ ದರ ಕೆ.ಜಿ.ಗೆ 300ರಿಂದ 400 ರೂ.ವರೆಗೆ ಇದೆ.
ತಾವರೆ ಹೂವು ಜೋಡಿಗೆ 50 ರೂ. ಇದೆ. ಕನಕಾಂಬರ ಮೊಳಕ್ಕೆ 50 ರೂ. ಇದ್ದರೆ, ಕೆ.ಜಿ.ಗೆ ಸುಮಾರು 2 ಸಾವಿರ ರೂ.ವರೆಗೆ ಇದೆ. ಮಲ್ಲಿಗೆ ಮೊಳಕ್ಕೆ 50 ರೂ. ಇದ್ದರೆ, ಕೆ.ಜಿ.ಗೆ 1 ಸಾವಿರ ರೂ.ವರೆಗೆ ಇದೆ.
ತುಳಸಿ ತೋರಣ ಮೊಳಕ್ಕೆ 60 ರೂ. ಇದ್ದು, ಮಾವಿನ ಎಲೆ ಕಟ್ಟು 10ರಿಂದ 30 ರೂ.ವರೆಗೆ ಮಾರಾಟವಾಗುತ್ತಿದೆ. ಬಾಳೆ ದಿಂಡು ಜೋಡಿಗೆ 50ರಿಂದ 80 ರೂ.ವರೆಗೆ ದರವಿದೆ.
ಹಣ್ಣುಗಳ ದರ:
ಹಬ್ಬದ ಪೂಜೆಗೆ ಅಗತ್ಯವಿರುವ ಹಣ್ಣುಗಳ ದರದಲ್ಲೂ ಏರಿಕೆ ಕಂಡುಬಂದಿದೆ. ಸೇಬು ಕೆ.ಜಿ.ಗೆ 200ರಿಂದ 300 ರೂ., ದಾಳಿಂಬೆ 100ರಿಂದ 250 ರೂ., ಸಪೋಟ 150ರಿಂದ 200 ರೂ. ಹಾಗೂ ದ್ರಾಕ್ಷಿ 120ರಿಂದ 150 ರೂ.ವರೆಗೆ ಇದೆ.
ಮೂಸಂಬಿ ಹಾಗೂ ಕಿತ್ತಳೆ ಕೆ.ಜಿ.ಗೆ 80ರಿಂದ 100 ರೂ. ಇದ್ದರೆ, ಬಾಳೆಹಣ್ಣು 80ರಿಂದ 150 ರೂ.ವರೆಗೆ ಮಾರಾಟವಾಗುತ್ತಿದೆ.
ತರಕಾರಿ ದರ:
ಈರುಳ್ಳಿ ಕೆ.ಜಿ.ಗೆ 60ರಿಂದ 70 ರೂ., ಹಸಿ ಮೆಣಸಿನಕಾಯಿ 40ರಿಂದ 60 ರೂ., ಬೀಟ್‌ರೂಟ್ 50ರಿಂದ 60 ರೂ. ಇದೆ. ಬೆಳ್ಳುಳ್ಳಿ ಕೆ.ಜಿ.ಗೆ 200ರಿಂದ 250 ರೂ.ವರೆಗೆ ದರವಿದೆ.
ನಿಂಬೆಹಣ್ಣು ಒಂದಕ್ಕೆ 8ರಿಂದ 15 ರೂ. ಹಾಗೂ ನುಗ್ಗೆಕಾಯಿ ಒಂದಕ್ಕೆ 10ರಿಂದ 15 ರೂ. ಇದೆ. ಕ್ಯಾಪ್ಸಿಕಂ 50ರಿಂದ 70 ರೂ. ಹಾಗೂ ಬಟಾಣಿ ಕೆ.ಜಿ.ಗೆ 140ರಿಂದ 160 ರೂ.ವರೆಗೆ ಮಾರಾಟವಾಗುತ್ತಿದೆ.
ದಿನಸಿ ವಸ್ತುಗಳ ದರ:
ಗೌರಿ-ಗಣೇಶ ಹಬ್ಬದ ಅಡುಗೆ ಹಾಗೂ ನೈವೇದ್ಯಕ್ಕೆ ಬೇಕಾಗುವ ದಿನಸಿ ವಸ್ತುಗಳ ದರವೂ ಹೀಗಿದೆ. ಬೆಲ್ಲ ಕೆ.ಜಿ.ಗೆ 50ರಿಂದ 55 ರೂ., ತೊಗರಿಬೇಳೆ 160ರಿಂದ 170 ರೂ., ಹುರಿಗಡಲೆ 150ರಿಂದ 180 ರೂ. ಹಾಗೂ ಕಡಲೆಬೀಜ 100ರಿಂದ 140 ರೂ. ಇದೆ.
ಸಕ್ಕರೆ ಕೆ.ಜಿ.ಗೆ 60ರಿಂದ 80 ರೂ., ಚಿರೋಟಿ ರವೆ 90ರಿಂದ 100 ರೂ., ಕಡಲೆಕಾಳು 90ರಿಂದ 100 ರೂ.ವರೆಗೆ ಇದೆ. ಮೈದಾ ಹಿಟ್ಟು ಕೆ.ಜಿ.ಗೆ 45ರಿಂದ 50 ರೂ. ಇದೆ.
ಅಡುಗೆ ಎಣ್ಣೆ ಲೀಟರ್‌ಗೆ 190ರಿಂದ 210 ರೂ.ವರೆಗೆ ಇದ್ದು, ವಿವಿಧ ಬ್ರ್ಯಾಂಡ್‌ಗಳಿಗೆ ಅನುಗುಣವಾಗಿ ದರದಲ್ಲಿ ವ್ಯತ್ಯಾಸವಿದೆ.
ಒಟ್ಟಾರೆ, ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಖರೀದಿ ಚಟುವಟಿಕೆ ಹೆಚ್ಚಾಗಿದ್ದು, ಹೂವು, ಹಣ್ಣು, ತರಕಾರಿ ಹಾಗೂ ದಿನಸಿ ವಸ್ತುಗಳ ದರ ಏರಿಕೆ ಜನರಿಗೆ ಹೆಚ್ಚುವರಿ ಹೊರೆ ತಂದಿದೆ.

