ಗುವಾಹಟಿ: ಪತ್ನಿಯನ್ನು ಹತ್ಯೆ ಮಾಡಿ, ಆಕೆಯ ತಲೆ ಸೇರಿದಂತೆ ದೇಹದ ಭಾಗಗಳನ್ನು ಫ್ರಿಜ್ನಲ್ಲಿ ಬಚ್ಚಿಟ್ಟಿದ್ದಾನೆ ಎನ್ನಲಾದ ಆರೋಪಿ ಪೊಲೀಸ್ ವಾಹನದಿಂದ ಜಿಗಿದು ಮೃತಪಟ್ಟಿರುವ ಘಟನೆ ಗುವಾಹಟಿಯ ಹತಿಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತನನ್ನು 30 ವರ್ಷದ ರಾಮಾನುಜ್ ಗೋಸ್ವಾಮಿ ಎಂದು ಗುರುತಿಸಲಾಗಿದೆ.
ವೈದ್ಯಕೀಯ ಪರೀಕ್ಷೆ ಪೂರ್ಣಗೊಂಡ ಬಳಿಕ ರಾಮಾನುಜ್ ಗೋಸ್ವಾಮಿಯನ್ನು ಪೊಲೀಸರು ಹತಿಗಾಂವ್ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ ನರಕಾಸುರ ಪಹಾರ್ ಪ್ರದೇಶದ ಬಳಿ ಪೊಲೀಸ್ ವಾಹನ ಚಲಿಸುತ್ತಿದ್ದಾಗ, ರಾಮಾನುಜ್ ಏಕಾಏಕಿ ಪೊಲೀಸ್ ಸಿಬ್ಬಂದಿ ಮೇಲೆ ದಾಳಿ ನಡೆಸಲು ಯತ್ನಿಸಿ ವಾಹನದಿಂದ ಜಿಗಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಲಿಸುತ್ತಿದ್ದ ಪೊಲೀಸ್ ವಾಹನದಿಂದ ಜಿಗಿದ ರಾಮಾನುಜ್ ಆಳವಾದ ಕಂದಕಕ್ಕೆ ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡಿದ್ದ. ಪೊಲೀಸರು ತಕ್ಷಣ ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರಾದರೂ, ವೈದ್ಯರು ರಾಮಾನುಜ್ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಪತ್ನಿಯ ಹತ್ಯೆ ಪ್ರಕರಣ
ಸೆಪ್ಟೆಂಬರ್ 3ರಂದು ಗುವಾಹಟಿಯಲ್ಲಿರುವ ತಮ್ಮ ಫ್ಲ್ಯಾಟ್ನಲ್ಲಿ 25 ವರ್ಷದ ಪತ್ನಿ ರಿಯಾ ತಾಲುಕ್ದಾರ್ ಅವರನ್ನು ರಾಮಾನುಜ್ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದರು. ಪತ್ನಿಯ ನಡವಳಿಕೆಯ ಬಗ್ಗೆ ಅನುಮಾನ ಹೊಂದಿದ್ದ ರಾಮಾನುಜ್, ಆಕೆ ಬೇರೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿದ್ದ ಎನ್ನಲಾಗಿದೆ.
ಫ್ಲ್ಯಾಟ್ನಿಂದ ದುರ್ವಾಸನೆ ಬರುತ್ತಿದೆ ಎಂದು ನೆರೆಹೊರೆಯವರು ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು. ಪೊಲೀಸರು ಮನೆಗೆ ತೆರಳಿ ಪರಿಶೀಲನೆ ನಡೆಸಿದಾಗ, ಫ್ರಿಜ್ನಲ್ಲಿದ್ದ ಕಪ್ಪು ಪಾಲಿಥಿನ್ ಬ್ಯಾಗ್ನಲ್ಲಿ ರಿಯಾಳ ಕತ್ತರಿಸಿದ ತಲೆ ಹಾಗೂ ಬೆರಳುಗಳು ಪತ್ತೆಯಾಗಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಾನುಜ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103(1) ಅಡಿಯಲ್ಲಿ ಕೊಲೆ ಹಾಗೂ ಸೆಕ್ಷನ್ 238 ಅಡಿಯಲ್ಲಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಆರೋಪ ದಾಖಲಿಸಲಾಗಿತ್ತು.
ಏಳು ದಿನಗಳ ಪೊಲೀಸ್ ಕಸ್ಟಡಿ
ಸೆಪ್ಟೆಂಬರ್ 6ರಂದು ಪೊಲೀಸರಿಗೆ ಶರಣಾಗಿದ್ದ ರಾಮಾನುಜ್ನನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಸೆಪ್ಟೆಂಬರ್ 8ರಂದು ಪೊಲೀಸರು ಆತನನ್ನು ಅಪರಾಧ ನಡೆದ ಸ್ಥಳಕ್ಕೆ ಕರೆದೊಯ್ದು ಪರಿಶೀಲನೆ ನಡೆಸಿದ್ದರು.
ಈ ವೇಳೆ ಹತ್ಯೆ ಬಗ್ಗೆ ಯಾವುದೇ ಪಶ್ಚಾತ್ತಾಪ ಅಥವಾ ಕ್ಷಮೆಯಾಚನೆ ಇಲ್ಲ ಎಂದು ರಾಮಾನುಜ್ ಹೇಳಿದ್ದ ಎನ್ನಲಾಗಿದೆ. ಅಲ್ಲದೆ, ತನ್ನ ಪತ್ನಿಯ ‘ಶುಗರ್ ಡ್ಯಾಡಿ’ ಎಂದು ಹೇಳಿಕೊಂಡಿದ್ದ ವ್ಯಕ್ತಿಯನ್ನು ಜೈಲಿನಿಂದ ಬಿಡುಗಡೆಯಾದ ಬಳಿಕ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಗೆ ಬಳಸಲಾಗಿದೆ ಎಂದು ಶಂಕಿಸಲಾಗಿರುವ ರಕ್ತದ ಕಲೆಗಳಿದ್ದ ಮಚ್ಚನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಪರಾಧ ನಡೆದ ಸಂದರ್ಭದಲ್ಲಿ ತಾನು ಮದ್ಯದ ಅಮಲಿನಲ್ಲಿದ್ದೆ ಎಂದು ರಾಮಾನುಜ್ ಪೊಲೀಸರಿಗೆ ತಿಳಿಸಿದ್ದ ಎನ್ನಲಾಗಿದೆ. ಫ್ಲ್ಯಾಟ್ ಪರಿಶೀಲನೆ ವೇಳೆ ಖಾಲಿ ಮದ್ಯದ ಬಾಟಲಿಗಳೂ ಪತ್ತೆಯಾಗಿದ್ದವು ಎಂದು ಅಧಿಕಾರಿಗಳು ಹೇಳಿದ್ದಾರೆ.
ಇನ್ನು ರಾಮಾನುಜ್ಗೆ ಮಾದಕ ವಸ್ತುಗಳ ವ್ಯಸನದ ಇತಿಹಾಸವಿತ್ತು, ಕೆಲವು ವೈದ್ಯಕೀಯ ಸಮಸ್ಯೆಗಳನ್ನು ಆತ ಮರೆಮಾಚಿದ್ದ ಹಾಗೂ 2019ರಲ್ಲಿ ಹಣಕಾಸು ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಎಂದು ರಿಯಾ ಕುಟುಂಬಸ್ಥರು ಆರೋಪಿಸಿದ್ದರು. ಈ ಆರೋಪಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.



