ಮಳೆಗಾಲದಲ್ಲಿ ಜ್ವರ, ವಾಂತಿ, ವಾಕರಿಕೆ ಹಾಗೂ ಅತಿಸಾರದಂತಹ ಆರೋಗ್ಯ ಸಮಸ್ಯೆಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ.
ಇಂತಹ ಸಂದರ್ಭದಲ್ಲಿ ಡೆಂಗ್ಯೂ ಇರಬಹುದೇ ಎಂಬ ಅನುಮಾನ ಮೂಡುವುದು ಸಹಜ. ಸಾಮಾನ್ಯವಾಗಿ ಡೆಂಗ್ಯೂ ಎಂದರೆ ಹೆಚ್ಚಿನ ಜ್ವರ, ತಲೆನೋವು, ಮೈ-ಕೈ ನೋವು ಹಾಗೂ ಸುಸ್ತು ನೆನಪಿಗೆ ಬರುತ್ತದೆ. ಆದರೆ ಸೋಂಕಿಗೆ ಒಳಗಾದ ಪ್ರತಿಯೊಬ್ಬರಲ್ಲೂ ಇದೇ ಲಕ್ಷಣಗಳು ಕಾಣಿಸಿಕೊಳ್ಳಬೇಕೆಂದಿಲ್ಲ.
ಕೆಲವರಲ್ಲಿ ಡೆಂಗ್ಯೂ ಸೋಂಕಿನ ಲಕ್ಷಣಗಳು ಸೌಮ್ಯವಾಗಿರಬಹುದು. ಇನ್ನೂ ಕೆಲವರಲ್ಲಿ ಸಾಮಾನ್ಯವಾಗಿ ಕಂಡುಬರುವ ಲಕ್ಷಣಗಳಿಗಿಂತ ಭಿನ್ನವಾದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಸ್ಪಷ್ಟವಾದ ಯಾವುದೇ ಲಕ್ಷಣಗಳಿಲ್ಲದೆಯೂ ಸೋಂಕು ಇರಬಹುದು. ಹೀಗಾಗಿ ಜ್ವರ ಇಲ್ಲ ಎಂಬ ಕಾರಣಕ್ಕೆ ಮಾತ್ರ ಡೆಂಗ್ಯೂ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಬಾರದು ಎಂದು ವೈದ್ಯರು ಎಚ್ಚರಿಸಿದ್ದಾರೆ.
ಯಥಾರ್ಥ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆಂತರಿಕ ವೈದ್ಯಕೀಯ ವಿಭಾಗದ ಹಿರಿಯ ಸಲಹೆಗಾರರಾದ ಡಾ. ರೇಷು ಅಗರ್ವಾಲ್ ಅವರ ಪ್ರಕಾರ, ಸುತ್ತಮುತ್ತ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿರುವ ಸಂದರ್ಭದಲ್ಲಿ ಹಠಾತ್ ಸುಸ್ತು, ಮೈ ನೋವು ಅಥವಾ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಂಡರೆ ಜ್ವರವಿಲ್ಲದಿದ್ದರೂ ಡೆಂಗ್ಯೂ ಸಾಧ್ಯತೆಯನ್ನು ಪರಿಗಣಿಸಬೇಕು.
ಯಾವ ಲಕ್ಷಣಗಳ ಬಗ್ಗೆ ಎಚ್ಚರಿಕೆ ವಹಿಸಬೇಕು?
ವಾಂತಿ, ಅತಿಸಾರ, ಹೊಟ್ಟೆ ನೋವು, ಅಜೀರ್ಣದ ಜತೆಗೆ ಸುಸ್ತು, ತಲೆನೋವು, ಕಣ್ಣಿನ ನೋವು, ಸ್ನಾಯು ಮತ್ತು ಕೀಲು ನೋವು, ಹಸಿವಾಗದಿರುವುದು ಹಾಗೂ ಚರ್ಮದ ಮೇಲೆ ಕೆಂಪು ಕಲೆಗಳು ಕಾಣಿಸಿಕೊಳ್ಳಬಹುದು. ಕೆಲವು ಸಂದರ್ಭಗಳಲ್ಲಿ ಡೆಂಗ್ಯೂ ದೇಹದ ಪ್ರಮುಖ ಅಂಗಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ನಿರಂತರ ಹೊಟ್ಟೆ ನೋವು, ಪದೇಪದೇ ವಾಂತಿ, ಉಸಿರಾಟದ ತೊಂದರೆ, ಮೂಗು ಅಥವಾ ಹಲ್ಲಿನ ಒಸಡುಗಳಿಂದ ರಕ್ತಸ್ರಾವ ಹಾಗೂ ತೀವ್ರ ಚಡಪಡಿಕೆಯಂತಹ ಲಕ್ಷಣಗಳು ಕಂಡುಬಂದರೆ ವಿಶೇಷ ಎಚ್ಚರಿಕೆ ವಹಿಸಬೇಕು. ಇವುಗಳನ್ನು ಕೇವಲ ಸುಸ್ತು ಅಥವಾ ಹವಾಮಾನ ಬದಲಾವಣೆಯಿಂದ ಉಂಟಾದ ಸಮಸ್ಯೆ ಎಂದು ನಿರ್ಲಕ್ಷಿಸಬಾರದು.
ಜ್ವರ ಕಡಿಮೆಯಾದರೆ ಅಪಾಯ ಮುಗಿಯಿತೇ?
ಡೆಂಗ್ಯೂ ಕುರಿತು ಇರುವ ಪ್ರಮುಖ ತಪ್ಪು ಕಲ್ಪನೆಗಳಲ್ಲಿ ಜ್ವರ ಕಡಿಮೆಯಾದ ಬಳಿಕ ಅಪಾಯವೂ ಮುಗಿಯುತ್ತದೆ ಎಂಬುದೂ ಒಂದು. ಆದರೆ ಕೆಲವು ರೋಗಿಗಳಲ್ಲಿ ಜ್ವರ ಕಡಿಮೆಯಾಗುವ ಸಮಯದಲ್ಲೇ ಮತ್ತಷ್ಟು ಆರೋಗ್ಯ ಸಮಸ್ಯೆಗಳು ಆರಂಭವಾಗಬಹುದು.
ಈ ಸಂದರ್ಭದಲ್ಲಿ ದೇಹದಲ್ಲಿ ನೀರಿನ ಕೊರತೆ ಸೇರಿದಂತೆ ಇತರ ತೊಂದರೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ, ಜ್ವರ ಕಡಿಮೆಯಾದ ಬಳಿಕವೂ ರೋಗಿಯ ಆರೋಗ್ಯದ ಮೇಲೆ ನಿಗಾ ಇರಿಸುವುದು ಮುಖ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಹೀಗಾಗಿ ಮಳೆಗಾಲದಲ್ಲಿ ಜ್ವರ ಮಾತ್ರವಲ್ಲದೆ ವಾಂತಿ, ಹೊಟ್ಟೆ ನೋವು, ಅತಿಸಾರ, ತೀವ್ರ ಸುಸ್ತು ಅಥವಾ ರಕ್ತಸ್ರಾವದಂತಹ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ.



