ರಾಯಚೂರು: ರಾಯಚೂರು ನಗರದ ಜಹಿರಾಬಾದ್‌ನ ಎಂ.ಈರಣ್ಣ ವೃತ್ತದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಚಾಲಕನ ಎಡವಟ್ಟಿನಿಂದ ಟ್ರ್ಯಾಕ್ಟರ್ ಹರಿದು ಇಬ್ಬರು ಬಾಲಕರು ದಾರುಣವಾಗಿ ಮೃತಪಟ್ಟಿದ್ದು, ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವ ಭೀಕರ ಘಟನೆ ಸಂಭವಿಸಿದೆ.
ಜಹಿರಾಬಾದ್‌ನಿಂದ ನಗರದ ಖಾಸಬಾವಿಗೆ ಗಣೇಶ ಮೂರ್ತಿಯ ವಿಸರ್ಜನೆ ಮೆರವಣಿಗೆ ಹೊರಟಿದ್ದ ವೇಳೆ ಈ ದುರಂತ ನಡೆದಿದೆ. ಮೆರವಣಿಗೆಯಲ್ಲಿದ್ದ ಟ್ರ್ಯಾಕ್ಟರ್ ಚಾಲಕ ಬ್ರೇಕ್ ಒತ್ತುವ ಬದಲು ಆಕ್ಸಿಲರೇಟರ್ ಒತ್ತಿದ ಹಿನ್ನೆಲೆಯಲ್ಲಿ, ವಾಹನವು ನಿಯಂತ್ರಣ ತಪ್ಪಿ ಮೆರವಣಿಗೆಯಲ್ಲಿದ್ದ ಜನರ ಮೇಲೆ ಹರಿದಿದೆ.
ಘಟನೆಯಲ್ಲಿ 14 ವರ್ಷದ ಸುಚಿತ್ ಹಾಗೂ 16 ವರ್ಷದ ಚರಣಕುಮಾರ್ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. 36 ವರ್ಷದ ವಿಜಯಕುಮಾರ್ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಪಘಾತದಲ್ಲಿ ಮತ್ತೂ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿದಂತೆ ರಾಯಚೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.



