ಬೆಳಗಾವಿ: ಕಿತ್ತೂರು ತಾಲೂಕಿನ ಅವರಾದಿ ಗ್ರಾಮ ಪಂಚಾಯ್ತಿಗೆ ನುಗ್ಗಿ ಮಾಜಿ ಯೋಧ ಹಾಗೂ ಅವರ ಪುತ್ರಿಯನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಕೊಲೆಯಾದ ಮಾಜಿ ಯೋಧ ರುದ್ರಪ್ಪ ಕುಂದರಗಿ ಅವರ ಸಹೋದರ ಬಸಪ್ಪ ಕುಂದರಗಿ, ಸಂಗಪ್ಪ ಕುಂದರಗಿ ಹಾಗೂ ಸಂಗಪ್ಪ ಅವರ ಪುತ್ರ ಮಡಿವಾಳಪ್ಪ ಕುಂದರಗಿ ಎಂದು ಗುರುತಿಸಲಾಗಿದೆ. ಕೊಲೆಗೆ ಬಳಸಲಾಗಿದೆ ಎನ್ನಲಾದ ಆಯುಧಗಳನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರುದ್ರಪ್ಪ ಕುಂದರಗಿ ಮತ್ತು ಅವರ ಸಹೋದರರ ನಡುವೆ ಆಸ್ತಿ ವಿಚಾರವಾಗಿ ಹಲವು ದಿನಗಳಿಂದ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ಆಸ್ತಿ ಪಾಲುದಾರಿಕೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ರುದ್ರಪ್ಪ ಅವರ ಮತ್ತೊಬ್ಬ ಸಹೋದರ ಗ್ರಾಮ ಪಂಚಾಯ್ತಿಗೆ ಬಂದಿದ್ದ ವೇಳೆ ಘಟನೆ ನಡೆದಿತ್ತು.
67 ವರ್ಷದ ರುದ್ರಪ್ಪ ಕುಂದರಗಿ ಹಾಗೂ ಅವರ 26 ವರ್ಷದ ಪುತ್ರಿ ಶಶಿಕಲಾ ಕುಂದರಗಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಘಟನೆಯಲ್ಲಿ ರುದ್ರಪ್ಪ ಅವರ ಕಾರು ಚಾಲಕನಿಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
38 ಗುಂಟೆ ಜಮೀನನ್ನು ಮೂವರು ಸಹೋದರರಿಗೆ ಹಂಚಿಕೆ ಮಾಡುವಂತೆ ನ್ಯಾಯಾಲಯ ಆದೇಶಿಸಿತ್ತು ಎನ್ನಲಾಗಿದೆ. ಆದರೆ ರುದ್ರಪ್ಪ ಅವರಿಗೆ ಹಂಚಿಕೆಯಾಗಿದ್ದ ಜಮೀನನ್ನು ಅವರು ಈಗಾಗಲೇ ಮಾರಾಟ ಮಾಡಿಕೊಂಡಿದ್ದರು ಎನ್ನಲಾಗಿದ್ದು, ಉಳಿದ ಜಮೀನಿನಲ್ಲೂ ತಮ್ಮ ಪಾಲು ಬೇಕೆಂದು ಪಟ್ಟು ಹಿಡಿದಿದ್ದರು ಎಂದು ಪೊಲೀಸರು ಪ್ರಾಥಮಿಕವಾಗಿ ಶಂಕಿಸಿದ್ದಾರೆ.
ಇದರಿಂದ ಸಹೋದರರ ನಡುವೆ ಮತ್ತೆ ವಿವಾದ ಉಂಟಾಗಿದ್ದು, ಇದೇ ಆಸ್ತಿ ವಿಚಾರದ ದ್ವೇಷದ ಹಿನ್ನೆಲೆಯಲ್ಲಿ ರುದ್ರಪ್ಪ ಹಾಗೂ ಅವರ ಪುತ್ರಿ ಶಶಿಕಲಾ ಅವರನ್ನು ಹತ್ಯೆ ಮಾಡಲಾಗಿದೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಕೊಲೆಯ ಹಿಂದಿನ ನಿಖರ ಕಾರಣ ಹಾಗೂ ಇತರ ಅಂಶಗಳ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.



