ಬೆಂಗಳೂರು: ವಿಮಾ ಕಂಪನಿಗಳಿಗೆ ಸಲ್ಲಿಕೆಯಾಗುವ ವಂಚನೆಪೂರಿತ ಕ್ಲೇಮ್‌ಗಳಿಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸಿಕೊಂಡು ತ್ವರಿತವಾಗಿ ತನಿಖೆ ನಡೆಸಲು ಕರ್ನಾಟಕ ಸರ್ಕಾರ ರಾಜ್ಯ ಮಟ್ಟದಲ್ಲಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿ ಬುಧವಾರ ಆದೇಶ ಹೊರಡಿಸಿದೆ.
ವಿಮಾ ಕಂಪನಿಗಳಿಗೆ ಸಂಬಂಧಿಸಿದ ವಂಚನೆಪೂರಿತ ಕ್ಲೇಮ್‌ಗಳ ಪ್ರಕರಣಗಳ ತನಿಖೆಗಾಗಿ ದೇಶದಾದ್ಯಂತ ರಾಜ್ಯ ಮಟ್ಟದಲ್ಲಿ ವಿಶೇಷ ತನಿಖಾ ತಂಡಗಳನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಎಸ್‌ಎಲ್‌ಪಿ (ಸಿವಿಲ್) ಸಂಖ್ಯೆ 5582/2023ರ ತೀರ್ಪಿನಲ್ಲಿ ನಿರ್ದೇಶನ ನೀಡಿತ್ತು. ಈ ನಿರ್ದೇಶನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇದೀಗ ಎಸ್‌ಐಟಿ ರಚಿಸಿದೆ.
ಎಸ್‌ಐಟಿ ತಂಡದಲ್ಲಿ ಯಾರೆಲ್ಲ ಇರಲಿದ್ದಾರೆ?
ಪೊಲೀಸ್ ಮಹಾನಿರೀಕ್ಷಕರ (ಐಜಿಪಿ) ಹುದ್ದೆಯ ಅಧಿಕಾರಿಯನ್ನು ವಿಶೇಷ ತನಿಖಾ ತಂಡದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಸಿಐಡಿಯಿಂದ ನಾಮನಿರ್ದೇಶನಗೊಳ್ಳುವ ಪೊಲೀಸ್ ಅಧೀಕ್ಷಕರು (ಎಸ್‌ಪಿ) ತಂಡದ ಸದಸ್ಯರಾಗಿರಲಿದ್ದಾರೆ.
ಇವರೊಂದಿಗೆ ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರು ನಾಮನಿರ್ದೇಶನ ಮಾಡುವ ಒಬ್ಬ ಉಪ ಪೊಲೀಸ್ ಅಧೀಕ್ಷಕರು (ಡಿವೈಎಸ್‌ಪಿ) ಹಾಗೂ ಮೂವರು ಪೊಲೀಸ್ ಇನ್‌ಸ್ಪೆಕ್ಟರ್‌ಗಳು (ಪಿಐ) ತಂಡದ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ.
ನೂತನ ಎಸ್‌ಐಟಿಗೆ ಕರ್ನಾಟಕ ರಾಜ್ಯದಾದ್ಯಂತ ತನಿಖಾ ವ್ಯಾಪ್ತಿ ಕಲ್ಪಿಸಲಾಗಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್), 2023ರ ಸೆಕ್ಷನ್ 2(1)(u) ಅಡಿಯಲ್ಲಿ ವಿಶೇಷ ತನಿಖಾ ತಂಡವನ್ನು ಪೊಲೀಸ್ ಠಾಣೆಯೆಂದು ಘೋಷಿಸಲಾಗಿದೆ.
ಅಲ್ಲದೆ, ಬಿಎನ್‌ಎಸ್‌ಎಸ್ ಸೆಕ್ಷನ್ 193ರ ಅನ್ವಯ ತನಿಖೆ ಪೂರ್ಣಗೊಳಿಸಿದ ಬಳಿಕ ಸಂಬಂಧಪಟ್ಟ ನ್ಯಾಯಾಲಯಗಳಿಗೆ ಅಂತಿಮ ವರದಿ ಸಲ್ಲಿಸುವ ಅಧಿಕಾರವನ್ನೂ ಎಸ್‌ಐಟಿ ಅಧಿಕಾರಿಗಳಿಗೆ ನೀಡಲಾಗಿದೆ.
ವಿಮಾ ಕಂಪನಿಗಳಿಗೆ ಸಲ್ಲಿಕೆಯಾಗುವ ವಂಚನೆಪೂರಿತ ಕ್ಲೇಮ್‌ಗಳಿಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸಿಕೊಳ್ಳುವುದು, ಪ್ರಕರಣಗಳ ಕುರಿತು ತನಿಖೆ ನಡೆಸುವುದು ಹಾಗೂ ತನಿಖೆಯ ಬಳಿಕ ಕಾನೂನು ಪ್ರಕ್ರಿಯೆ ಕೈಗೊಳ್ಳುವುದು ಈ ವಿಶೇಷ ತಂಡದ ಪ್ರಮುಖ ಜವಾಬ್ದಾರಿಯಾಗಿರಲಿದೆ. ನೂತನವಾಗಿ ರಚನೆಯಾಗಿರುವ ಎಸ್‌ಐಟಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ (ಕಾನೂನು ಮತ್ತು ಸುವ್ಯವಸ್ಥೆ) ನೇರ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸಲಿದೆ.



