HomePolitics Newsಯಶವಂತರಾಯಗೌಡ ಪಾಟೀಲ್ ಒತ್ತಡಕ್ಕೆ ಮಣಿಯಿತಾ ಸರ್ಕಾರ? ರಾಜೀನಾಮೆ ಬೆನ್ನಲ್ಲೇ ಇಂಡಿ ತಾಲೂಕು ಬರಪಟ್ಟಿಗೆ ಸೇರ್ಪಡೆ

ಯಶವಂತರಾಯಗೌಡ ಪಾಟೀಲ್ ಒತ್ತಡಕ್ಕೆ ಮಣಿಯಿತಾ ಸರ್ಕಾರ? ರಾಜೀನಾಮೆ ಬೆನ್ನಲ್ಲೇ ಇಂಡಿ ತಾಲೂಕು ಬರಪಟ್ಟಿಗೆ ಸೇರ್ಪಡೆ

For Dai;y Updates Join Our whatsapp Group

ಬೆಂಗಳೂರು: ವಿಜಯಪುರ ಜಿಲ್ಲೆಯ ಇಂಡಿ ಮತ್ತು ಚಡಚಣ ತಾಲೂಕುಗಳನ್ನು ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿದ್ದಕ್ಕೆ ಅಸಮಾಧಾನಗೊಂಡು ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸ್ಥಳ ಸತ್ಯಶೋಧನಾ ವರದಿ ಆಧರಿಸಿ ಇಂಡಿ ಮತ್ತು ಚಡಚಣ ಸೇರಿದಂತೆ ಹೆಚ್ಚುವರಿ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆಗೊಳಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಇಂಡಿ ಹಾಗೂ ಚಡಚಣ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಸರ್ಕಾರ ಸ್ಪಂದಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಯಶವಂತರಾಯಗೌಡ ಪಾಟೀಲ್ ಬುಧವಾರ ವಿಧಾನಸಭಾಧ್ಯಕ್ಷರನ್ನು ಭೇಟಿಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

‘ನಮ್ಮ ಮಾತು ಮತ್ತು ಭಾವನೆಗಳಿಗೆ ಬೆಲೆ ಇಲ್ಲದಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದ ಪಾಟೀಲ್, ತಮ್ಮ ಕ್ಷೇತ್ರದ ಜನರು ಹಾಗೂ ರೈತರ ಬೇಡಿಕೆಗೆ ಸ್ಪಂದಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದರು. ಆದರೆ ಅವರ ರಾಜೀನಾಮೆಯನ್ನು ವಿಧಾನಸಭಾಧ್ಯಕ್ಷರು ಅಂಗೀಕರಿಸಿರಲಿಲ್ಲ.

ಯಶವಂತರಾಯಗೌಡ ಪಾಟೀಲ್ ಅವರ ರಾಜೀನಾಮೆ ವಿಚಾರ ವಿಧಾನಸಭೆಯಲ್ಲೂ ತೀವ್ರ ಚರ್ಚೆಗೆ ಕಾರಣವಾಗಿತ್ತು. ಪ್ರತಿಪಕ್ಷಗಳು ರಾಜೀನಾಮೆ ಪತ್ರದ ಪ್ರತಿಯನ್ನು ಪ್ರದರ್ಶಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದವು. ಆಡಳಿತ ಪಕ್ಷದ ನಾಯಕರು ಬರ ಘೋಷಣೆಗೆ ನಿಗದಿತ ಮಾನದಂಡಗಳಿದ್ದು, ಅವುಗಳ ಆಧಾರದಲ್ಲಿಯೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದರು.

ಈ ಬೆಳವಣಿಗೆಗಳ ಬೆನ್ನಲ್ಲೇ ಸ್ಥಳ ಸತ್ಯಶೋಧನಾ ವರದಿಯನ್ನು ಆಧರಿಸಿ ಹೆಚ್ಚುವರಿ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದರಲ್ಲಿ ಯಶವಂತರಾಯಗೌಡ ಪಾಟೀಲ್ ಪ್ರತಿನಿಧಿಸುವ ಇಂಡಿ ಹಾಗೂ ಚಡಚಣ ತಾಲೂಕುಗಳೂ ಸೇರಿವೆ.

ಬರಪಟ್ಟಿಗೆ ಸೇರಿದ ತಾಲೂಕುಗಳು ಯಾವುವು?

ಔರಾದ್, ಗೋಕಾಕ್, ರಾಮದುರ್ಗ, ಸವದತ್ತಿ, ಕಾಗವಾಡ, ಇಂಡಿ, ಚಡಚಣ, ಕಲಘಟಗಿ, ಕುಂದಗೋಳ, ಅಳ್ನಾವರ, ಶಿಕಾರಿಪುರ, ಶಿವಮೊಗ್ಗ, ಭದ್ರಾವತಿ, ಸೊರಬ, ತೀರ್ಥಹಳ್ಳಿ, ಚಿಕ್ಕಮಗಳೂರು, ಕಳಸ, ಮಡಿಕೇರಿ, ಕುಶಾಲನಗರ, ಬೆಳ್ತಂಗಡಿ, ಬಂಟ್ವಾಳ, ಉಳ್ಳಾಲ, ಉಡುಪಿ, ಬೈಂದೂರು, ಅಂಕೋಲಾ, ಭಟ್ಕಳ, ಹಳಿಯಾಳ ಹಾಗೂ ಶಿರಸಿ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ.

ಹೊಸದಾಗಿ ಬರಪೀಡಿತ ಪಟ್ಟಿಗೆ ಸೇರ್ಪಡೆಯಾಗಿರುವ ತಾಲೂಕುಗಳಲ್ಲಿ ರೈತರಿಗೆ ಬರ ಪರಿಹಾರ ಸೇರಿದಂತೆ ಸರ್ಕಾರದ ನಿಯಮಗಳ ಅನ್ವಯ ದೊರೆಯುವ ನೆರವು ಒದಗಿಸುವ ಪ್ರಕ್ರಿಯೆ ಮುಂದಿನ ಹಂತದಲ್ಲಿ ನಡೆಯಲಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img