ನವದೆಹಲಿ: ಭಾರತದ ಉದ್ಯಮ ಜಗತ್ತಿನ ಬಹುನಿರೀಕ್ಷಿತ ‘ಎಂಟಿಎಂ ಹುರುನ್ ಇಂಡಿಯಾ ರಿಚ್ ಲಿಸ್ಟ್ 2026’ (MTM Hurun India Rich List 2026) ಅಧಿಕೃತವಾಗಿ ಬಿಡುಗಡೆಯಾಗಿದೆ. ಈ ಬಾರಿಯ ಪಟ್ಟಿಯಲ್ಲಿ ಪ್ರಮುಖ ಉದ್ಯಮಿ ಗೌತಮ್ ಅದಾನಿ (Gautam Adani) ಹಾಗೂ ಅವರ ಕುಟುಂಬವು ಮುಕೇಶ್ ಅಂಬಾನಿ (Mukesh Ambani) ಅವರನ್ನು ಹಿಂದಿಕ್ಕಿ ಮತ್ತೆ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ವರದಿಯ ಪ್ರಕಾರ, ಗೌತಮ್ ಅದಾನಿ ಹಾಗೂ ಕುಟುಂಬದ ಒಟ್ಟು ಸಂಪತ್ತು ಶೇ. 13 ರಷ್ಟು ಏರಿಕೆಯಾಗಿದ್ದು, ಬರೋಬ್ಬರಿ 9.23 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಇನ್ನೊಂದೆಡೆ, ಮುಕೇಶ್ ಅಂಬಾನಿ ಹಾಗೂ ಕುಟುಂಬದ ಸಂಪತ್ತು ಶೇ. 10 ರಷ್ಟು ಕುಸಿತ ಕಂಡು 8.63 ಲಕ್ಷ ಕೋಟಿ ರೂಪಾಯಿಗೆ ಇಳಿಕೆಯಾಗಿದೆ. ಇದರಿಂದಾಗಿ ಅದಾನಿ ಹಾಗೂ ಅಂಬಾನಿ ಕುಟುಂಬಗಳ ಸಂಪತ್ತಿನ ನಡುವೆ ಸುಮಾರು ₹59,400 ಕೋಟಿ ಭಾರಿ ವ್ಯತ್ಯಾಸ ಉಂಟಾಗಿದೆ.
ಉಕ್ಕು ಉದ್ಯಮದ ದೈತ್ಯ ಲಕ್ಷ್ಮಿ ನಿವಾಸ್ ಮಿತ್ತಲ್ ಹಾಗೂ ಅವರ ಕುಟುಂಬದ ಸಂಪತ್ತು ಈ ಬಾರಿ ಭಾರಿ ಏರಿಕೆ ಕಂಡಿದೆ. ಅವರ ಸಂಪತ್ತು ಸುಮಾರು ಎರಡು ಪಟ್ಟು ಹೆಚ್ಚಾಗಿ 3.39 ಲಕ್ಷ ಕೋಟಿ ರೂಪಾಯಿಗೆ ತಲುಪಿದ್ದು, ಭಾರತದ ಶ್ರೀಮಂತರ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ್ದಾರೆ. ಇನ್ನು ಔಷಧ ತಯಾರಿಕಾ ಸಂಸ್ಥೆ ‘ಸೀರಂ ಇನ್‌ಸ್ಟಿಟ್ಯೂಟ್’ನ ಸೈರಸ್ ಪೂನಾವಾಲಾ ಅವರು 4ನೇ ಸ್ಥಾನದಲ್ಲಿದ್ದಾರೆ.
ಭಾರತದಲ್ಲಿ ಶತಕೋಟ್ಯಧಿಪತಿಗಳ (Billionaires) ಸಂಖ್ಯೆ ಹೊಸ ಸಾರ್ವಕಾಲಿಕ ದಾಖಲೆ ಬರೆದಿದೆ. ಈ ಬಾರಿ ದೇಶದಲ್ಲಿ ಒಟ್ಟು 391 ಶತಕೋಟ್ಯಧಿಪತಿಗಳು ಇದ್ದಾರೆ ಎಂದು ವರದಿ ತಿಳಿಸಿದೆ. ಕನಿಷ್ಠ ₹1,000 ಕೋಟಿ ಸಂಪತ್ತು ಹೊಂದಿರುವ ಶ್ರೀಮಂತರ ಸಂಖ್ಯೆ 1,810ಕ್ಕೆ ಏರಿಕೆಯಾಗಿದ್ದು, ಇವರ ಒಟ್ಟು ಸಂಪತ್ತು ಸುಮಾರು ₹187.5 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ.
ಈ ಬಾರಿಯ ಶ್ರೀಮಂತರ ಪಟ್ಟಿಯಲ್ಲಿ ಬೆಂಗಳೂರಿನ ಉದ್ಯಮಿಗೂ ಸ್ಥಾನ ಸಿಕ್ಕಿರುವುದು ವಿಶೇಷ. ಕ್ವಾಂಟಂ ಕಂಪ್ಯೂಟರ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಗೇಂದ್ರ ನಾಗರಾಜ್ ಅವರು ಮೊದಲ ಬಾರಿಗೆ ಈ ಪಟ್ಟಿಗೆ ಪ್ರವೇಶ ಪಡೆದಿದ್ದಾರೆ. ಅವರ ಒಟ್ಟು ಸಂಪತ್ತು ಸುಮಾರು 1,700 ಕೋಟಿ ರೂಪಾಯಿ ಎಂದು ವರದಿ ಹೇಳಿದೆ.



