ಬೆಂಗಳೂರು: ನಗರದ ಹೊರವಲಯದ ಹೊರಮಾವು ಬಳಿಯ ಬಂಜಾರ ಲೇಔಟ್‌ನಲ್ಲಿ ಕಾರಿನಲ್ಲಿದ್ದ ಗಣೇಶ ಮೂರ್ತಿಯನ್ನು ಕಂಡು ವ್ಯಕ್ತಿಯೊಬ್ಬ ಕಾರಿಗೆ ಕಾಲಿನಿಂದ ಒದ್ದಿದ್ದಾನೆ ಎನ್ನಲಾದ ಘಟನೆ ನಡೆದಿದೆ.
ಬೆಳಗ್ಗೆ ವಾಕಿಂಗ್‌ಗೆ ತೆರಳುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಕಾರಿಗೆ ಕಾಲಿನಿಂದ ಒದ್ದು ಮುಂದೆ ಹೋಗಿದ್ದಾನೆ ಎನ್ನಲಾಗಿದೆ. ಈ ದೃಶ್ಯ ಸ್ಥಳೀಯರ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಳಿಕ ಸ್ಥಳೀಯರು ವ್ಯಕ್ತಿಯನ್ನು ಪ್ರಶ್ನಿಸಿದ್ದಾರೆ.
ಈ ವೇಳೆ ವ್ಯಕ್ತಿ ತಮಿಳು ಭಾಷೆಯಲ್ಲಿ ಮಾತನಾಡುತ್ತಾ ಸ್ಥಳೀಯರೊಂದಿಗೆ ವಾಗ್ವಾದಕ್ಕಿಳಿದಿದ್ದಾನೆ ಎನ್ನಲಾಗಿದೆ. ಗಣೇಶ ಮೂರ್ತಿ ವಿಚಾರವಾಗಿ ಪ್ರಶ್ನಿಸಿದಾಗ, “ಗಣೇಶ ಏನು ದೇವರಾ?” ಎಂದು ಹೇಳುತ್ತಾ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಅಲ್ಲದೇ, ಪ್ರಶ್ನೆ ಮಾಡಿದ ಸ್ಥಳೀಯರಿಗೆ “ನೀನೇನು ವಾಟಾಳ್ ನಾಗರಾಜ್, ಪ್ರಶ್ನೆ ಮಾಡೋಕೆ?” ಎಂದು ವ್ಯಕ್ತಿ ಪ್ರಶ್ನಿಸಿದ್ದಾನೆ ಎನ್ನಲಾಗಿದೆ.
ಘಟನೆ ವೇಳೆ ಸ್ಥಳೀಯರೊಬ್ಬರು ವಿಡಿಯೋ ಮಾಡಿಕೊಂಡಿದ್ದು, “ಅಲ್ಲಾ, ನಾನು ಕನ್ನಡಿಗ” ಎಂದು ಹೇಳಿರುವುದು ವಿಡಿಯೋದಲ್ಲಿ ಕೇಳಿಬಂದಿದೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



