ಮಹಾರಾಷ್ಟ್ರ: ದುರ್ಗಾ ದೇವಿಯ ಮೂರ್ತಿಯೊಂದಿಗೆ ಪ್ರಯಾಣಿಸುತ್ತಿದ್ದ ಭಕ್ತರಿದ್ದ ಪಿಕಪ್ ವ್ಯಾನ್‌ಗೆ ಹಿಂಬದಿಯಿಂದ ಲಾರಿಯೊಂದು ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ದುರಂತ ಅಂತ್ಯ ಕಂಡಿರುವ ಘಟನೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ನಡೆದಿದೆ. ಶುಕ್ರವಾರ (ಅಕ್ಟೋಬರ್ 2) ಬೆಳಿಗ್ಗೆ ಈ ಭೀಕರ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಒಟ್ಟು 21 ಮಂದಿ ಗಾಯಗೊಂಡಿದ್ದಾರೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ಪಿಕಪ್ ವ್ಯಾನ್‌ನಲ್ಲಿದ್ದ ಭಕ್ತರು ದುರ್ಗಾ ದೇವಿಯ ಮೂರ್ತಿಯನ್ನು ತೆಗೆದುಕೊಂಡು ವಾರ್ಧಾ ಕಡೆಗೆ ತೆರಳುತ್ತಿದ್ದರು. ಧಾಮಂಗಾಂವ್ ರೈಲ್ವೆ ನಿಲ್ದಾಣದ ಸಮೀಪವಿರುವ ಸಮೃದ್ಧಿ ಮಹಾಮಾರ್ಗದಲ್ಲಿ ವ್ಯಾನ್ ಚಲಿಸುತ್ತಿದ್ದಾಗ, ಹಿಂಬದಿಯಿಂದ ಬಂದ ಲಾರಿ ರಭಸವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಪಿಕಪ್ ವ್ಯಾನ್‌ನಲ್ಲಿದ್ದ ಐವರು ಭಕ್ತರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ತಕ್ಷಣವೇ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮತ್ತಿಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇದರಿಂದಾಗಿ ಒಟ್ಟು ಸಾವಿನ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.
ಅಪಘಾತದಲ್ಲಿ ಒಟ್ಟು 21 ಜನರು ಗಾಯಗೊಂಡಿದ್ದು, ಈ ಪೈಕಿ 4 ರಿಂದ 5 ಜನರ ಸ್ಥಿತಿ ತೀವ್ರ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನುಳಿದ 14 ರಿಂದ 15 ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಧಾಮಂಗಾಂವ್ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ಪತ್ತೆಹಚ್ಚಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.



