ಬೆಂಗಳೂರು: ಆಗಸ್ಟ್ ತಿಂಗಳಲ್ಲಿ ಗರಿಷ್ಠ ಮಟ್ಟ ತಲುಪಿದ್ದ ಚಿನ್ನದ ದರ 16,397 ರೂಪಾಯಿಯಿಂದ ಮತ್ತೆ 15,202 ರೂಪಾಯಿಗೆ ಕುಸಿದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಅನಗತ್ಯವಾಗಿ ಚಿನ್ನ ಖರೀದಿ ಮಾಡದಂತೆ ಮನವಿ ಮಾಡಿರುವುದರಿಂದ ಚಿನ್ನದ ಮೇಲಿನ ಹೂಡಿಕೆ ದಿಢೀರ್ ಕುಸಿತ ಕಂಡಿದೆ. ಇದರಿಂದಾಗಿ ಗ್ರಾಹಕರು ಚಿನ್ನ ಖರೀದಿಗೆ ಹಿಂದೇಟು ಹಾಕುವ ಸಾಧ್ಯತೆ ಇದ್ದು, ಈ ಮೂಲಕ ವಿದೇಶಿ ವಿನಿಮಯದಿಂದಾಗುವ ನಷ್ಟ ತಪ್ಪಿಸಲು ದೇಶ ಮುಂದಾಗಿದೆ.
ಗುಡ್ ರಿಟರ್ನ್ಸ್ ವರದಿ ಮಾಡಿರುವ ಬೆಲೆ ಪಟ್ಟಿಯ ಪ್ರಕಾರ, ಸೆಪ್ಟೆಂಬರ್ 2, 2026ರ ಬುಧವಾರದಂದು 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ 207 ರೂಪಾಯಿ ಇಳಿಕೆಯಾಗಿದ್ದು, ಗ್ರಾಂ ಬೆಲೆ ಈಗ 15,202 ರೂಪಾಯಿಗೆ ತಲುಪಿದೆ. 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ 2,070 ರೂಪಾಯಿ ಇಳಿಕೆಯಾಗಿ, ಬೆಲೆ 1,52,020 ರೂಪಾಯಿಗೆ ತಗ್ಗಿದೆ.
22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 190 ರೂಪಾಯಿ ಇಳಿಕೆಯಾಗಿದ್ದು, 1 ಗ್ರಾಂ ಬೆಲೆ ಈಗ 13,935 ರೂಪಾಯಿ ಆಗಿದೆ. 10 ಗ್ರಾಂ ಬೆಲೆಯಲ್ಲಿ 1,900 ರೂಪಾಯಿ ಇಳಿಕೆಯಾಗಿ, ಪ್ರಸ್ತುತ ಬೆಲೆ 1,39,350 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಶುದ್ಧ ಚಿನ್ನದ ಗ್ರಾಂ ಬೆಲೆ 15,202 ರೂಪಾಯಿ ಇದ್ದು, ಬೆಳ್ಳಿ ಬೆಲೆ ಗ್ರಾಂಗೆ 245 ರೂಪಾಯಿಗೆ ಇಳಿಕೆಯಾಗಿದೆ. ಬೆಳ್ಳಿ ಬೆಲೆ ಕೆಜಿಗೆ 2,45,000 ರೂಪಾಯಿ ಆಗಿದೆ.
ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಸ್ವದೇಶಿ ಅಭಿಯಾನಕ್ಕೆ ಕರೆ ನೀಡಿದ್ದಾರೆ. ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕಾಗಿ ಹಾಗೂ ಭಾರತವನ್ನು ವಿಶ್ವದ ಮುಂಚೂಣಿ ದೇಶವಾಗಿ ರೂಪಿಸಲು ಜನತೆ ‘ವೋಕಲ್ ಫಾರ್ ಲೋಕಲ್’ ಎಂಬ ಸ್ವದೇಶಿ ತತ್ವ ಅಳವಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಜಾಗತಿಕ ಅನಿಶ್ಚಿತತೆಗಳ ನಡುವೆಯೂ ನಿರೀಕ್ಷೆಗೂ ಮೀರಿ ಶೇ.7.8ರಷ್ಟು ಜಿಡಿಪಿ ಪ್ರಗತಿ ದಾಖಲಿಸಿರುವ ಭಾರತದ ಸಾಧನೆ ಕುರಿತು ಬಿಷ್ಕೆಕ್‌ನಿಂದ ಮಂಗಳವಾರ ಬೆಳಗ್ಗೆ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಹಂಚಿಕೊಂಡಿರುವ ಅವರು, “ಸ್ವದೇಶಿ ಉತ್ಪನ್ನಗಳನ್ನು ಆಯ್ಕೆ ಮಾಡುವ ಮೂಲಕ ದೇಶದ ಆರ್ಥಿಕತೆಗೆ ಮತ್ತಷ್ಟು ಬಲ ತುಂಬಬೇಕು” ಎಂದು ಕರೆ ನೀಡಿದ್ದಾರೆ. “ಅನಗತ್ಯವಾಗಿ ಚಿನ್ನ ಖರೀದಿ ಮಾಡಬೇಡಿ, ಅತ್ಯಗತ್ಯವಿದ್ದಾಗ ಮಾತ್ರ ಬಂಗಾರ ಖರೀದಿಸಬೇಕು” ಎಂದು ಮೋದಿ ಕರೆ ನೀಡಿದ್ದು, ಇದರ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಕುಸಿತ ಕಂಡುಬಂದಿದೆ.



