ಪ್ರಭಾಸ್ ಸಿನಿಮಾ ಅಂದ್ಮೇಲೆ ಫ್ಯಾನ್ಸ್ ನಿರೀಕ್ಷೆ ಯಾವ ಮಟ್ಟದಲ್ಲಿರುತ್ತೆ ಅನ್ನೋದನ್ನ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇದೀಗ ಡಾರ್ಲಿಂಗ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಸಿನಿಮಾಗಳ ಪಟ್ಟಿಯಲ್ಲಿ ‘ಫೌಜಿ’ ಕೂಡ ಮುಂಚೂಣಿಯಲ್ಲಿದೆ. ಇದೇ ವರ್ಷ ತೆರೆಗೆ ಬರಲಿದೆ ಎನ್ನಲಾಗಿದ್ದ ಸಿನಿಮಾ ದಿಢೀರ್ ಮುಂದಕ್ಕೆ ಹೋಗಿದ್ದು ಯಾಕೆ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿತ್ತು. ಇದೀಗ ಆ ಪ್ರಶ್ನೆಗೆ ಸಿನಿಮಾದ ನಟ ಜಿತಿನ್ ಗುಲಾಟಿ ಉತ್ತರ ಕೊಟ್ಟಿದ್ದಾರೆ.
‘ಅರ್ಧಬೆಂದ ಸಿನಿಮಾ ಕೊಡೋಕೆ ಚಿತ್ರತಂಡ ರೆಡಿಯಿಲ್ಲ’
ಪ್ರಭಾಸ್ ಜೊತೆ ‘ಫೌಜಿ’ಯಲ್ಲಿ ಪ್ರಮುಖ ಪಾತ್ರ ಮಾಡುತ್ತಿರುವ ಬಾಲಿವುಡ್ ನಟ ಜಿತಿನ್ ಗುಲಾಟಿ ಇತ್ತೀಚಿನ ಸಂದರ್ಶನದಲ್ಲಿ ಸಿನಿಮಾದ ಬಿಡುಗಡೆ ವಿಳಂಬವಾಗುತ್ತಿರುವುದಕ್ಕೆ ಕಾರಣ ವಿವರಿಸಿದ್ದಾರೆ.
‘ಫೌಜಿ’ ಕೇವಲ ಒಂದು ಸಿನಿಮಾ ಆಗಬಾರದು, ಪ್ರೇಕ್ಷಕರ ಮನಸ್ಸಿನಲ್ಲಿ ದೀರ್ಘಕಾಲ ಉಳಿಯುವ ಕಲಾಕೃತಿಯಾಗಬೇಕು ಎಂಬುದು ಚಿತ್ರತಂಡದ ಉದ್ದೇಶವಂತೆ. ಹೀಗಾಗಿ ಅವಸರದಲ್ಲಿ ಅರ್ಧಬೆಂದ ಪ್ರಾಜೆಕ್ಟ್ ಅನ್ನು ಪ್ರೇಕ್ಷಕರ ಮುಂದೆ ತರಲು ನಿರ್ದೇಶಕರು ಮತ್ತು ನಿರ್ಮಾಪಕರು ಬಯಸುತ್ತಿಲ್ಲ ಎಂದು ಜಿತಿನ್ ಹೇಳಿದ್ದಾರೆ.
ಪರಿಪೂರ್ಣ ಔಟ್‌ಪುಟ್‌ಗಾಗಿ ಇನ್ನೂ ಕೆಲವು ತಿಂಗಳು ಹೆಚ್ಚುವರಿಯಾಗಿ ಕೆಲಸ ಮಾಡಬೇಕಾದರೂ ಪರವಾಗಿಲ್ಲ ಎಂಬ ನಿರ್ಧಾರಕ್ಕೆ ಚಿತ್ರತಂಡ ಬಂದಿದೆ. ಇದೇ ಕಾರಣದಿಂದ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ ಎಂದು ಅವರು ತಿಳಿಸಿದ್ದಾರೆ.
ಹನು ರಾಘವಪುಡಿಗೆ ಜಿತಿನ್ ಫುಲ್ ಮಾರ್ಕ್ಸ್!
ನಿರ್ದೇಶಕ ಹನು ರಾಘವಪುಡಿ ಅವರ ಕೆಲಸದ ಶೈಲಿಯನ್ನೂ ಜಿತಿನ್ ಗುಲಾಟಿ ಮೆಚ್ಚಿಕೊಂಡಿದ್ದಾರೆ. ಹನು ಒಬ್ಬ ಪರ್ಫೆಕ್ಷನಿಸ್ಟ್ ಆಗಿದ್ದು, ಪ್ರತಿಯೊಂದು ದೃಶ್ಯವನ್ನೂ ಅಚ್ಚುಕಟ್ಟಾಗಿ ತೆರೆಗೆ ತರಲು ಶ್ರಮಿಸುತ್ತಾರೆ ಎಂದಿದ್ದಾರೆ.
‘ಫೌಜಿ’ ಬೃಹತ್ ಕ್ಯಾನ್ವಾಸ್ ಹಾಗೂ ತಾಂತ್ರಿಕ ಅದ್ದೂರಿತನ ಹೊಂದಿರುವ ಸಿನಿಮಾ. ಆದರೆ ಈ ಅದ್ದೂರಿತನದ ನಡುವೆ ಕಥೆಯ ಎಮೋಷನ್ ಹಾಗೂ ಮಾನವ ಸಂಬಂಧಗಳು ಕಳೆದುಹೋಗದಂತೆ ನಿರ್ದೇಶಕರು ಎಚ್ಚರಿಕೆ ವಹಿಸಿದ್ದಾರೆ ಎನ್ನಲಾಗಿದೆ.
‘ಬಾಹುಬಲಿ’ ಬಳಿಕ ಮತ್ತೆ ಅಂಥದ್ದೇ ಗ್ರ್ಯಾಂಡ್ ಪ್ರಭಾಸ್?
‘ಫೌಜಿ’ ಮೇಲಿನ ನಿರೀಕ್ಷೆಯನ್ನು ನಿರ್ಮಾಪಕ ರವಿಶಂಕರ್ ಹೇಳಿಕೆ ಮತ್ತಷ್ಟು ಹೆಚ್ಚಿಸಿದೆ. ‘ಬಾಹುಬಲಿ’ ಬಳಿಕ ಪ್ರಭಾಸ್ ಅವರನ್ನು ಎಷ್ಟು ಗ್ರ್ಯಾಂಡ್ ಅವತಾರದಲ್ಲಿ ಅಭಿಮಾನಿಗಳು ನೋಡಲು ಬಯಸುತ್ತಿದ್ದಾರೋ, ಅದಕ್ಕಿಂತಲೂ ದೊಡ್ಡ ಅನುಭವವನ್ನು ‘ಫೌಜಿ’ ನೀಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಐತಿಹಾಸಿಕ ಹಿನ್ನೆಲೆಯ ಬೃಹತ್ ಕಥೆಯನ್ನು ಸಿನಿಮಾ ಒಳಗೊಂಡಿದ್ದು, ಪ್ರಭಾಸ್ ಅಭಿಮಾನಿಗಳ ಪಾಲಿಗೆ ದೀರ್ಘಕಾಲ ನೆನಪಿನಲ್ಲಿ ಉಳಿಯುವ ಚಿತ್ರವಾಗಲಿದೆ ಎಂಬ ಭರವಸೆಯನ್ನು ಚಿತ್ರತಂಡ ವ್ಯಕ್ತಪಡಿಸಿದೆ.
ಪ್ರಭಾಸ್ ಜೊತೆ ದೊಡ್ಡ ತಾರಾಬಳಗ
‘ಫೌಜಿ’ಯಲ್ಲಿ ಪ್ರಭಾಸ್‌ಗೆ ನಾಯಕಿಯಾಗಿ ಇಮಾನ್ವಿ ಇಸ್ಮಾಯಿಲ್ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದ ಪ್ರತಿಭಾವಂತ ನಟಿ ಚೈತ್ರಾ ಆಚಾರ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.
ಇವರೊಂದಿಗೆ ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ಸಜ್ಜದ್ ದೆಲಾಫ್ರೂಜ್ ಹಾಗೂ ಜಿತಿನ್ ಗುಲಾಟಿ ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ. ಸದ್ಯ ಚಿತ್ರದ ಚಿತ್ರೀಕರಣ ಮುಂದುವರಿದಿದ್ದು, ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಸಿನಿಮಾ ಪೂರ್ಣಗೊಳಿಸುವತ್ತ ಚಿತ್ರತಂಡ ಗಮನ ಹರಿಸಿದೆ.
‘ಫೌಜಿ’ ಬಳಿಕವೂ ಡಾರ್ಲಿಂಗ್ ಫುಲ್ ಬ್ಯುಸಿ!
‘ಫೌಜಿ’ ಮುಂದಿನ ವರ್ಷದ ಆರಂಭದಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ. ಅಧಿಕೃತ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಇನ್ನಷ್ಟೇ ಪ್ರಕಟಿಸಬೇಕಿದೆ. ಇತ್ತ ಪ್ರಭಾಸ್ ಕೈಯಲ್ಲಿ ಸಾಲು ಸಾಲು ಬಿಗ್ ಪ್ರಾಜೆಕ್ಟ್‌ಗಳಿವೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್’, ‘ಕಲ್ಕಿ 2898 AD’ ಮುಂದುವರಿದ ಭಾಗ ಹಾಗೂ ‘ಸಲಾರ್ 2’ ಕೂಡ ಪ್ರಭಾಸ್ ಮುಂದಿನ ಸಿನಿಮಾಗಳ ಪಟ್ಟಿಯಲ್ಲಿವೆ.
ಹೀಗಾಗಿ ‘ಫೌಜಿ’ಗಾಗಿ ಅಭಿಮಾನಿಗಳು ಇನ್ನಷ್ಟು ಸಮಯ ಕಾಯಬೇಕಾದರೂ, ‘ಅವಸರದ ಸಿನಿಮಾ ಅಲ್ಲ, ಪರ್ಫೆಕ್ಟ್ ಸಿನಿಮಾ ಕೊಡುತ್ತೇವೆ’ ಎಂಬ ಚಿತ್ರತಂಡದ ಭರವಸೆ ಡಾರ್ಲಿಂಗ್ ಫ್ಯಾನ್ಸ್ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.



