ಚಿತ್ರದುರ್ಗ: ‘ಬೇಲ್’ ಸಿನಿಮಾ ಪ್ರಮೋಷನ್‌ಗಾಗಿ ಚಿತ್ರದುರ್ಗಕ್ಕೆ ಆಗಮಿಸಿದ್ದ ನಟ ಶಿವರಾಜ್‌ಕುಮಾರ್ ಅವರಿಗೆ ಅಭಿಮಾನಿಗಳು ಅದ್ದೂರಿ ಸ್ವಾಗತ ಕೋರಿದರು.
ಈ ವೇಳೆ ಪಟಾಕಿ ಸಿಡಿಸುವ ಸಂದರ್ಭದಲ್ಲಿ ಫ್ಲವರ್ ಪಾಟ್ ಏಕಾಏಕಿ ಸ್ಫೋಟಗೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.
ಚಿತ್ರದುರ್ಗದ ಖಾಸಗಿ ಶೋರೂಂವೊಂದಕ್ಕೆ ಶಿವರಾಜ್‌ಕುಮಾರ್ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ಫ್ಲವರ್ ಪಾಟ್ ಏಕಾಏಕಿ ಸ್ಫೋಟಗೊಂಡಿದ್ದು, ಅದರ ಸಿಡಿತದ ಪರಿಣಾಮ ಶಿವರಾಜ್‌ಕುಮಾರ್ ಅವರ ಮೇಲೂ ಉಂಟಾಗಿದೆ.
ಘಟನೆಯಿಂದ ಸ್ಥಳದಲ್ಲಿದ್ದ ಅಭಿಮಾನಿಗಳು ಹಾಗೂ ಸಿಬ್ಬಂದಿ ಕೆಲಕಾಲ ಆತಂಕಕ್ಕೊಳಗಾದರು. ಆದರೆ ಅದೃಷ್ಟವಶಾತ್ ಶಿವರಾಜ್‌ಕುಮಾರ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದು, ಸುರಕ್ಷಿತವಾಗಿದ್ದಾರೆ. ಬಳಿಕ ಅವರು ಅಭಿಮಾನಿಗಳೊಂದಿಗೆ ಮಾತನಾಡಿದರು.
ಇದೇ ವೇಳೆ ‘ಬೇಲ್’ ಸಿನಿಮಾದ ಬಗ್ಗೆ ಮಾತನಾಡಿದ ಶಿವರಾಜ್‌ಕುಮಾರ್, ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ಸಂತಸ ತಂದಿದೆ ಎಂದರು.
‘ಬೇಲ್’ ಎಲ್ಲೆಡೆ ಉತ್ತಮವಾಗಿ ಪ್ರದರ್ಶನ ಕಾಣುತ್ತಿದೆ. ಇದು ಕುಟುಂಬ ಸಮೇತ ಕುಳಿತು ನೋಡಬಹುದಾದ ಸಿನಿಮಾ ಎಂದು ಶಿವರಾಜ್‌ಕುಮಾರ್ ಹೇಳಿದರು.
ದೊಡ್ಡ ಬಜೆಟ್ ಸಿನಿಮಾ ಮಾಡಿದರೆ ಮಾತ್ರ ಯಶಸ್ಸು ಸಿಗುತ್ತದೆ ಎಂಬುದು ತಪ್ಪು ಕಲ್ಪನೆ. ಸಿನಿಮಾ ಎಂದರೆ ಸಿನಿಮಾ ಅಷ್ಟೇ. ದೊಡ್ಡ ಬಜೆಟ್, ಸಣ್ಣ ಬಜೆಟ್ ಎನ್ನುವುದು ನಾವು ಕಲ್ಪಿಸಿಕೊಳ್ಳುವ ವಿಚಾರ ಎಂದು ಅವರು ಅಭಿಪ್ರಾಯಪಟ್ಟರು.



