ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಮೈಸೂರು ಅರಮನೆಯಲ್ಲಿ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ನಡುವೆ ನಟಿ ಕಾಜಲ್ ಅಗರ್ವಾಲ್ ಮೈಸೂರು ಅರಮನೆಗೆ ಭೇಟಿ ನೀಡಿ ಅರಮನೆಯ ವೈಭವವನ್ನು ಕಣ್ತುಂಬಿಕೊಂಡಿದ್ದಾರೆ.
ಅರಮನೆಗೆ ಆಗಮಿಸಿದ ಕಾಜಲ್ ಅಗರ್ವಾಲ್ ಅವರನ್ನು ಅಧಿಕಾರಿಗಳು ಆತ್ಮೀಯವಾಗಿ ಸ್ವಾಗತಿಸಿ, ಗೌರವಪೂರ್ವಕವಾಗಿ ಸನ್ಮಾನಿಸಿದರು. ಬಳಿಕ ಅರಮನೆಯ ಇತಿಹಾಸ, ಪರಂಪರೆ ಹಾಗೂ ಅದರ ಮಹತ್ವದ ಕುರಿತು ನಟಿಗೆ ವಿವರಿಸಲಾಯಿತು. ಅರಮನೆಯ ವೈಭವವನ್ನು ವೀಕ್ಷಿಸಿದ ಕಾಜಲ್ ಅಗರ್ವಾಲ್, ಆತಿಥ್ಯ ಹಾಗೂ ಮಾಹಿತಿಗಾಗಿ ಧನ್ಯವಾದ ಅರ್ಪಿಸಿದರು.
ಇನ್ನು ನಟಿ ಕಾಜಲ್ ಅಗರ್ವಾಲ್ ಮೈಸೂರು ಅರಮನೆಗೆ ಭೇಟಿ ನೀಡಿರುವ ವಿಷಯ ತಿಳಿಯುತ್ತಿದ್ದಂತೆ ಪ್ರವಾಸಿಗರು ಹಾಗೂ ಅಭಿಮಾನಿಗಳು ಅವರನ್ನು ನೋಡಲು ಮುಗಿಬಿದ್ದರು. ತಮ್ಮ ನೆಚ್ಚಿನ ನಟಿಯನ್ನು ಕಂಡ ಅಭಿಮಾನಿಗಳು ಫೋಟೋ ಹಾಗೂ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಮೈಸೂರು ದಸರಾ ಹಿನ್ನೆಲೆಯಲ್ಲಿ ಅರಮನೆಗೆ ಪ್ರವಾಸಿಗರ ಭೇಟಿ ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಕಾಜಲ್ ಅಗರ್ವಾಲ್ ಅವರ ಅರಮನೆ ಭೇಟಿ ಗಮನ ಸೆಳೆದಿದೆ.



