ಬೆಂಗಳೂರು: ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ತರಕಾರಿ ಹಾಗೂ ಸೊಪ್ಪಿನ ಬೆಲೆಗಳಲ್ಲಿ ಗಣನೀಯ ಏರಿಕೆಯಾಗಿದ್ದು, ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಟೊಮೆಟೊ, ಬೀನ್ಸ್ ಸೇರಿದಂತೆ ಹಲವು ತರಕಾರಿಗಳ ದರ ದಿಢೀರ್ ಹೆಚ್ಚಾಗಿದೆ.
ಕಳೆದ ವಾರ ಕೆ.ಜಿ.ಗೆ 25 ರೂಪಾಯಿ ಇದ್ದ ಟೊಮೆಟೊ ಬೆಲೆ ಇದೀಗ 54 ರೂಪಾಯಿಗೆ ಏರಿಕೆಯಾಗಿದೆ. 70 ರೂಪಾಯಿ ಇದ್ದ ಬೀನ್ಸ್ ದರ 96 ರೂಪಾಯಿಗೆ ಹೆಚ್ಚಾಗಿದೆ. ಇದರ ಜೊತೆಗೆ ಬಿಳಿ ಬದನೆಕಾಯಿ, ಕ್ಯಾಪ್ಸಿಕಂ, ಗೋರಿಕಾಯಿ, ಸೌತೆಕಾಯಿ, ಮೂಲಂಗಿ ಹಾಗೂ ಬೀಟ್‌ರೂಟ್ ಬೆಲೆಗಳಲ್ಲೂ ಏರಿಕೆಯಾಗಿದೆ.
ತರಕಾರಿ ಬೆಲೆ ಏರಿಕೆಗೆ ಅಕಾಲಿಕ ಮಳೆ ಹಾಗೂ ಅಧಿಕ ತಾಪಮಾನ ಪ್ರಮುಖ ಕಾರಣ ಎನ್ನಲಾಗಿದೆ. ಹವಾಮಾನ ವೈಪರೀತ್ಯದಿಂದ ಹಲವು ಪ್ರದೇಶಗಳಲ್ಲಿ ಬೆಳೆ ಹಾನಿಯಾಗಿದ್ದು, ಮಾರುಕಟ್ಟೆಗೆ ತರಕಾರಿ ಪೂರೈಕೆ ಕಡಿಮೆಯಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತರಕಾರಿಗಳಷ್ಟೇ ಅಲ್ಲದೆ ಸೊಪ್ಪಿನ ಬೆಲೆಯೂ ಹೆಚ್ಚಾಗಿದೆ. 8ರಿಂದ 10 ರೂಪಾಯಿಗೆ ಸಿಗುತ್ತಿದ್ದ ಒಂದು ಕಟ್ಟು ಸೊಪ್ಪಿನ ಬೆಲೆ ಇದೀಗ 25ರಿಂದ 30 ರೂಪಾಯಿಗೆ ಏರಿಕೆಯಾಗಿದೆ. ಪಾಲಕ್ ಸೊಪ್ಪಿನ ದರ ಕೂಡ ಒಂದು ಕಟ್ಟಿಗೆ 10 ರೂಪಾಯಿಯಿಂದ 25 ರೂಪಾಯಿಗೆ ಹೆಚ್ಚಾಗಿದೆ.
ಇನ್ನು ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಮಳೆಯ ಮುನ್ಸೂಚನೆಯೂ ಇರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲೂ ತರಕಾರಿ ಬೆಲೆ ಏರಿಕೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಎಪಿಎಂಸಿ ವರ್ತಕರು ಅಭಿಪ್ರಾಯಪಟ್ಟಿದ್ದಾರೆ.
ತರಕಾರಿ ದರ ಏರಿಕೆಯಿಂದಾಗಿ ದಿನನಿತ್ಯದ ಅಡುಗೆ ಖರ್ಚು ಹೆಚ್ಚಾಗಿದ್ದು, ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ ಬೀಳುವಂತಾಗಿದೆ.



