ಧಾರವಾಡ: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕಾರು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಧಾರವಾಡ ಹೊರವಲಯದ ಬೈಪಾಸ್ ರಸ್ತೆಯಲ್ಲಿ ನಡೆದಿದೆ.
ಅದೃಷ್ಟವಶಾತ್, ಕಾರಿನಲ್ಲಿದ್ದವರು ತಕ್ಷಣ ಕೆಳಗಿಳಿದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಅವೀದ್ ಶೇಖ್ ಅವರಿಗೆ ಸೇರಿದ KA-29-ME-3528 ನೋಂದಣಿ ಸಂಖ್ಯೆಯ ರೆನಾಲ್ಟ್ ಡಸ್ಟರ್ ಕಾರು ಹುಬ್ಬಳ್ಳಿಯಿಂದ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳಕ್ಕೆ ತೆರಳುತ್ತಿತ್ತು. ಈ ವೇಳೆ ಧಾರವಾಡ ಬೈಪಾಸ್ ರಸ್ತೆಯ ಹಳಿಯಾಳ ಸೇತುವೆ ಬಳಿ ಕಾರಿನಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿದೆ.
ಇದನ್ನು ಗಮನಿಸಿದ ಕಾರಿನಲ್ಲಿದ್ದವರು ತಕ್ಷಣ ಹೊರಬಂದಿದ್ದಾರೆ. ಅವರು ಕೆಳಗಿಳಿದ ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ಕಾರಿಗೆ ವ್ಯಾಪಿಸಿದ್ದು, ವಾಹನ ಸಂಪೂರ್ಣವಾಗಿ ಸುಟ್ಟುಹೋಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಕಾರಿಗೆ ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



