ಮಂಗಳೂರು: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಇದೀಗ ಮಹತ್ವದ ಕ್ರಮ ಕೈಗೊಂಡಿದ್ದು, ಈ ಹಿಂದೆ ಪ್ರಕರಣದ ತನಿಖೆಯಲ್ಲಿ ಭಾಗಿಯಾಗಿದ್ದ 15ಕ್ಕೂ ಹೆಚ್ಚು ಅಧಿಕಾರಿ ಹಾಗೂ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.
2012ರಲ್ಲಿ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರಂಭಿಕ ತನಿಖೆಯಿಂದ ಹಿಡಿದು ಸಿಐಡಿ ಹಾಗೂ ಸಿಬಿಐ ತನಿಖೆಯವರೆಗೆ ಭಾಗಿಯಾಗಿದ್ದ ಅಧಿಕಾರಿಗಳನ್ನು ವಿಚಾರಣೆಗೆ ಕರೆಯಲಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಸಂದರ್ಭದಿಂದ ವಿವಿಧ ಹಂತಗಳಲ್ಲಿ ತನಿಖೆ ನಡೆಸಿದ್ದ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲು ಎಸ್ಐಟಿ ಮುಂದಾಗಿದೆ.
ಸಿಆರ್ಪಿಸಿ ಸೆಕ್ಷನ್ 160ರ ಅಡಿಯಲ್ಲಿ ಅಧಿಕಾರಿಗಳಿಗೆ ಸಮನ್ಸ್ ನೀಡಲಾಗಿದ್ದು, ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹಿಂದಿನ ತನಿಖೆಯಲ್ಲಿ ಸಂಗ್ರಹಿಸಲಾಗಿದ್ದ ದಾಖಲೆಗಳು, ಸಾಕ್ಷ್ಯಗಳು ಹಾಗೂ ಇತರ ಮಾಹಿತಿಗಳನ್ನು ಪರಿಶೀಲಿಸುತ್ತಿರುವ ಎಸ್ಐಟಿ, ತನಿಖಾಧಿಕಾರಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಸಿದ್ಧತೆ ನಡೆಸಿದೆ.
ಪ್ರಕರಣದ ತನಿಖೆಯ ವಿವಿಧ ಹಂತಗಳಲ್ಲಿ ಕೈಗೊಂಡ ಕ್ರಮಗಳು, ಸಾಕ್ಷ್ಯ ಸಂಗ್ರಹಣೆ ಹಾಗೂ ತನಿಖಾ ಪ್ರಕ್ರಿಯೆಯ ಕುರಿತು ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆಯುವ ಉದ್ದೇಶ ಹೊಂದಲಾಗಿದೆ. ಹಿಂದಿನ ತನಿಖೆಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ, ಅವುಗಳ ಆಧಾರದ ಮೇಲೆ ಮುಂದಿನ ತನಿಖೆಯನ್ನು ನಡೆಸಲು ಎಸ್ಐಟಿ ಮುಂದಾಗಿದೆ.
ಸೌಜನ್ಯ ಪ್ರಕರಣದ ಮರು ತನಿಖೆಯಲ್ಲಿ ಹಿಂದಿನ ತನಿಖಾಧಿಕಾರಿಗಳಿಗೆ ನೋಟಿಸ್ ನೀಡಿರುವುದು ಮಹತ್ವದ ಬೆಳವಣಿಗೆಯಾಗಿದ್ದು, ಶುಕ್ರವಾರ ನಡೆಯಲಿರುವ ವಿಚಾರಣೆಯತ್ತ ಗಮನ ಹರಿದಿದೆ. ಅಧಿಕಾರಿಗಳ ವಿಚಾರಣೆಯಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ.










