ವಾಷಿಂಗ್ಟನ್: ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಸೌಕರ್ಯಗಳ ಮೇಲೆ ಬೃಹತ್ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿರುವ ಟೆಕ್ ದೈತ್ಯ ಮೈಕ್ರೋಸಾಫ್ಟ್, ಇದೀಗ ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿರ್ಗಮನ ಯೋಜನೆಯನ್ನು ಪರಿಚಯಿಸಿರುವುದಾಗಿ ವರದಿಯಾಗಿದೆ. ಭಾರತ, ಅಮೆರಿಕ, ಬ್ರಿಟನ್ ಹಾಗೂ ಕೆನಡಾದ ಅರ್ಹ ಉದ್ಯೋಗಿಗಳಿಗೆ ಈ ಅವಕಾಶ ನೀಡಲಾಗುತ್ತಿದ್ದು, ಸುಮಾರು 60 ಸಾವಿರ ಸಿಬ್ಬಂದಿ ಯೋಜನೆಯ ವ್ಯಾಪ್ತಿಗೆ ಬರಬಹುದು ಎನ್ನಲಾಗಿದೆ.
ಹೌದು, ತಂತ್ರಜ್ಞಾನ ಕ್ಷೇತ್ರದಲ್ಲಿ AI ಬಳಕೆ ಹೆಚ್ಚುತ್ತಿರುವ ಬೆನ್ನಲ್ಲೇ ಜಾಗತಿಕ ಕಂಪನಿಗಳು ತಮ್ಮ ಕಾರ್ಯವಿಧಾನ ಹಾಗೂ ಉದ್ಯೋಗಿಗಳ ನಿರ್ವಹಣೆಯಲ್ಲಿ ಬದಲಾವಣೆಗಳನ್ನು ಮಾಡುತ್ತಿವೆ. ಇದೇ ಹಿನ್ನೆಲೆಯಲ್ಲಿ ಮೈಕ್ರೋಸಾಫ್ಟ್ ಕೂಡ ವೆಚ್ಚ ನಿಯಂತ್ರಣ ಮತ್ತು ಮಾನವ ಸಂಪನ್ಮೂಲ ಮರುಹೊಂದಾಣಿಕೆಯ ಭಾಗವಾಗಿ ಸ್ವಯಂಪ್ರೇರಿತ ನಿರ್ಗಮನ ಯೋಜನೆ ಪ್ರಕಟಿಸಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.
ಅಷ್ಟಕ್ಕೂ ಈ ಯೋಜನೆ ಏನು ಅಂದ್ರೆ, ಸಂಸ್ಥೆಯಲ್ಲಿ ಮುಂದುವರಿಯಲು ಇಚ್ಛಿಸದ ಅರ್ಹ ಉದ್ಯೋಗಿಗಳು ನಿಗದಿತ ಅವಧಿಯೊಳಗೆ ಸ್ವಯಂಪ್ರೇರಿತವಾಗಿ ಕಂಪನಿಯಿಂದ ಹೊರಬರುವ ಅವಕಾಶವನ್ನು ಪಡೆಯುತ್ತಾರೆ. ಇದು ಎಲ್ಲ ಉದ್ಯೋಗಿಗಳಿಗೂ ಕಡ್ಡಾಯವಾಗಿ ಕೆಲಸ ಬಿಡಿಸುವ ಕ್ರಮವಲ್ಲ. ಬದಲಾಗಿ, ಅರ್ಹ ಸಿಬ್ಬಂದಿಗೆ ನೀಡಲಾಗುತ್ತಿರುವ ಆಯ್ಕೆಯಾಗಿದೆ.
ವರದಿಯ ಪ್ರಕಾರ, ಮೈಕ್ರೋಸಾಫ್ಟ್ನ ಜಾಗತಿಕ ಕಾರ್ಯಪಡೆಯ ಶೇಕಡಾ 25ಕ್ಕೂ ಹೆಚ್ಚು ಉದ್ಯೋಗಿಗಳು ಈ ಯೋಜನೆಯ ವ್ಯಾಪ್ತಿಗೆ ಬರಬಹುದು. ಅಂದರೆ ಸುಮಾರು 60 ಸಾವಿರ ಸಿಬ್ಬಂದಿ ಅರ್ಹರಾಗುವ ಸಾಧ್ಯತೆಯಿದೆ. ಆದರೆ ಈ ಸಂಖ್ಯೆಯಷ್ಟು ಉದ್ಯೋಗಿಗಳು ವಾಸ್ತವವಾಗಿ ಕಂಪನಿ ತೊರೆಯುತ್ತಾರೆ ಎಂದರ್ಥವಲ್ಲ.
ಭಾರತ, ಅಮೆರಿಕ, ಯುನೈಟೆಡ್ ಕಿಂಗ್ಡಮ್ ಹಾಗೂ ಕೆನಡಾದಲ್ಲಿ ಲೆವೆಲ್ 70 ಮತ್ತು ಅದಕ್ಕಿಂತ ಕೆಳಗಿನ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಹ ಉದ್ಯೋಗಿಗಳಿಗೆ ಈ ಅವಕಾಶ ಲಭ್ಯವಿದೆ ಎಂದು ವರದಿಯಾಗಿದೆ.
ವಿಶೇಷವಾಗಿ AI ಎಕ್ಸ್ಪೀರಿಯನ್ಸಸ್, ಕೊಪೈಲಟ್, ಹಣಕಾಸು, ಮಾನವ ಸಂಪನ್ಮೂಲ, ಎಕ್ಸ್ಬಾಕ್ಸ್ ಹಾಗೂ ವಿಂಡೋಸ್ ಮತ್ತು ಡಿವೈಸಸ್ ವಿಭಾಗಗಳ ಉದ್ಯೋಗಿಗಳು ಈ ಯೋಜನೆಯಡಿ ಅರ್ಜಿ ಸಲ್ಲಿಸಬಹುದು ಎನ್ನಲಾಗಿದೆ. ಆದರೆ ಮಾರ್ಕೆಟಿಂಗ್, ಕಮರ್ಷಿಯಲ್ ಬಿಸಿನೆಸ್ ಹಾಗೂ ಸೆಕ್ಯುರಿಟಿ ತಂಡಗಳನ್ನು ಯೋಜನೆಯಿಂದ ಹೊರಗಿಡಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಮೈಕ್ರೋಸಾಫ್ಟ್ನ ಮುಖ್ಯ ಸಿಬ್ಬಂದಿ ಅಧಿಕಾರಿ ಎಮಿ ಕೋಲ್ಮನ್ ಅವರು ಆಂತರಿಕ ಪತ್ರದ ಮೂಲಕ ಈ ಯೋಜನೆಯ ಉದ್ದೇಶವನ್ನು ವಿವರಿಸಿರುವುದಾಗಿ ವರದಿಯಾಗಿದೆ. ಕಂಪನಿಯ ಹೊರಗೆ ಹೊಸ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಉದ್ಯೋಗಿಗಳಿಗೆ ಸೂಕ್ತ ಬೆಂಬಲದೊಂದಿಗೆ ನಿರ್ಗಮಿಸಲು ಅವಕಾಶ ಕಲ್ಪಿಸುವುದು ಹಾಗೂ ಬದಲಾಗುತ್ತಿರುವ ತಂತ್ರಜ್ಞಾನ ಅಗತ್ಯಗಳಿಗೆ ಅನುಗುಣವಾಗಿ ಕಾರ್ಯಪಡೆಯನ್ನು ಮರುಹೊಂದಿಸುವುದು ಯೋಜನೆಯ ಉದ್ದೇಶ ಎಂದು ತಿಳಿಸಿದ್ದಾರೆ.
ಇನ್ನು ಜೂನ್ 30ರ ವಾರ್ಷಿಕ ದಾಖಲೆಯ ಪ್ರಕಾರ, ಮೈಕ್ರೋಸಾಫ್ಟ್ ಜಾಗತಿಕವಾಗಿ ಸುಮಾರು 2 ಲಕ್ಷದ 23 ಸಾವಿರ ಪೂರ್ಣಾವಧಿ ಉದ್ಯೋಗಿಗಳನ್ನು ಹೊಂದಿದೆ. ಈ ಪೈಕಿ ಸುಮಾರು ಶೇಕಡಾ 27ರಷ್ಟು ಸಿಬ್ಬಂದಿ ಹೊಸ ಸ್ವಯಂಪ್ರೇರಿತ ನಿರ್ಗಮನ ಯೋಜನೆಗೆ ಅರ್ಹರಾಗಿದ್ದಾರೆ. ಆದರೆ ಎಷ್ಟು ಮಂದಿ ಈ ಅವಕಾಶವನ್ನು ಬಳಸಿಕೊಳ್ಳುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ವಿಶೇಷವಾಗಿ, ಅರ್ಹ ಉದ್ಯೋಗಿಗಳಿಗೆ ಕಂಪನಿಯಿಂದ ಇಮೇಲ್ ಮೂಲಕ ಮಾಹಿತಿ ನೀಡಲಾಗುತ್ತಿದೆ. ಉದ್ಯೋಗಿಗಳು ಡಿಸೆಂಬರ್ ಮೊದಲ ವಾರದೊಳಗೆ ತಮ್ಮ ನಿರ್ಧಾರ ತಿಳಿಸಬೇಕಾಗಿದ್ದು, ಯೋಜನೆಯನ್ನು ಆಯ್ಕೆ ಮಾಡಿಕೊಂಡವರು ಡಿಸೆಂಬರ್ 31ರಂದು ಸಂಸ್ಥೆಯಿಂದ ನಿರ್ಗಮಿಸುವ ನಿರೀಕ್ಷೆಯಿದೆ.
ಮತ್ತೊಂದೆಡೆ ಮೈಕ್ರೋಸಾಫ್ಟ್ AI ತಂತ್ರಜ್ಞಾನಕ್ಕೆ ಭಾರೀ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡುತ್ತಿದೆ. 2026ರ ಕ್ಯಾಲೆಂಡರ್ ವರ್ಷದಲ್ಲಿ ಡೇಟಾ ಸೆಂಟರ್ಗಳು, AI ಚಿಪ್ಗಳು ಹಾಗೂ ಸಂಬಂಧಿತ ಮೂಲಸೌಕರ್ಯಗಳಿಗಾಗಿ ಸುಮಾರು 175 ಬಿಲಿಯನ್ ಡಾಲರ್ ವೆಚ್ಚ ಮಾಡುವ ಯೋಜನೆ ಹೊಂದಿದೆ. ಈ ಬೃಹತ್ ಹೂಡಿಕೆಯಿಂದ ಕಂಪನಿಗೆ ಎಷ್ಟು ಆದಾಯ ಬರಲಿದೆ ಎಂಬುದರತ್ತ ಹೂಡಿಕೆದಾರರ ಗಮನ ನೆಟ್ಟಿದೆ.
ಇದೇ ಮೊದಲ ಬಾರಿಗೆ ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ನಿರ್ಗಮನದ ಅವಕಾಶ ನೀಡುತ್ತಿಲ್ಲ. ಈ ವರ್ಷದ ಆರಂಭದಲ್ಲಿಯೂ ಅಮೆರಿಕದ ಸುಮಾರು 8,750 ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿವೃತ್ತಿ ಯೋಜನೆ ನೀಡಲಾಗಿತ್ತು. ಜುಲೈನಲ್ಲಿ ಎಕ್ಸ್ಬಾಕ್ಸ್ ಗೇಮಿಂಗ್ ವಿಭಾಗ ಸೇರಿದಂತೆ ವಿವಿಧ ವಿಭಾಗಗಳ ಪುನರ್ರಚನೆಯ ಭಾಗವಾಗಿ ಸುಮಾರು 4,800 ಉದ್ಯೋಗಗಳನ್ನು ಕಡಿತಗೊಳಿಸಲಾಗಿತ್ತು.
ಇನ್ನು ಕಂಪನಿಯ ತ್ರೈಮಾಸಿಕ ಆರ್ಥಿಕ ಫಲಿತಾಂಶ ಪ್ರಕಟವಾಗುವುದಕ್ಕೂ ಕೆಲವೇ ದಿನಗಳ ಮುನ್ನ ಈ ನಿರ್ಧಾರ ಹೊರಬಿದ್ದಿದೆ. ಹೀಗಾಗಿ AI ಹೂಡಿಕೆ, ಉದ್ಯೋಗಿಗಳ ನಿರ್ವಹಣೆ ಹಾಗೂ ಕಂಪನಿಯ ಮುಂದಿನ ಆರ್ಥಿಕ ಯೋಜನೆಗಳ ಬಗ್ಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಚರ್ಚೆ ಆರಂಭವಾಗಿದೆ.









