ಧಾರವಾಡ: ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ-2026ರಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ವಿರುದ್ಧ 9,323 ಮತಗಳ ಅಂತರದಲ್ಲಿ ಜಯಭೇರಿ ಬಾರಿಸಿದ್ದಾರೆ ಎಂದು ಚುನಾವಣಾಧಿಕಾರಿಯಾಗಿರುವ ಬೆಳಗಾವಿ ಪ್ರಾದೇಶಿಕ ಆಯುಕ್ತೆ ಕೆ.ಎಂ. ಜಾನಕಿ ತಿಳಿಸಿದ್ದಾರೆ.
ಅಕ್ಟೋಬರ್ 27ರಂದು ಬೆಳಿಗ್ಗೆ 8 ಗಂಟೆಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಆರಂಭಗೊಂಡ ಮತ ಎಣಿಕೆ ಪ್ರಕ್ರಿಯೆ ಅಕ್ಟೋಬರ್ 28ರ ಮಧ್ಯರಾತ್ರಿ 2 ಗಂಟೆಗೆ ಮುಕ್ತಾಯಗೊಂಡಿತು.
ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಸಂಕನೂರ ಮೇಲುಗೈ
ಮೊದಲ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಎಸ್.ವಿ. ಸಂಕನೂರ ಅವರು 33,711 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅವರು 24,388 ಮತಗಳನ್ನು ಪಡೆದಿದ್ದಾರೆ. ಈ ಮೂಲಕ ಸಂಕನೂರ ಅವರು 9,323 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಶೇ.75.62ರಷ್ಟು ಮತದಾನ
ಅಕ್ಟೋಬರ್ 23ರಂದು ನಡೆದ ಚುನಾವಣೆಯಲ್ಲಿ ಒಟ್ಟು 97,400 ಮತದಾರರ ಪೈಕಿ 73,658 ಜನರು ಮತ ಚಲಾಯಿಸಿದ್ದರು. ಈ ಮೂಲಕ ಶೇ.75.62ರಷ್ಟು ಮತದಾನ ದಾಖಲಾಗಿತ್ತು. ಮತ ಚಲಾಯಿಸಿದವರಲ್ಲಿ 45,110 ಪುರುಷರು ಹಾಗೂ 28,548 ಮಹಿಳೆಯರು ಸೇರಿದ್ದರು.
ಇತರ ಅಭ್ಯರ್ಥಿಗಳು ಪಡೆದ ಮತಗಳು
ಕಾಂತಕುಮಾರ ಆರ್. (ಪಕ್ಷೇತರ) — 4,055
ಡಾ. ಜಿ.ಎಚ್. ಇಮ್ರಾಪುರ (ಪಕ್ಷೇತರ) — 338
ಉಮೇಶ ಕೃಷ್ಣಪ್ಪ ದೈವಜ್ಞ (ಪಕ್ಷೇತರ) — 228
ನಿಶಾಂತ ಶಂಕರ ಬಂಕಾಪುರ (ಪಕ್ಷೇತರ) — 143
ಕೃಷ್ಣಾ ಎಚ್. ಬಳೆಗಾರ (ಕೆ.ಆರ್.ಎಸ್.) — 141
ಅಬ್ದುಲ್ ಮನ್ನಾನ (ಪಕ್ಷೇತರ) — 120
ಸಂತೋಷ ಮನೋಹರ ವೆರ್ಣಿಕರ (ಪಕ್ಷೇತರ) — 85
ಜೀಶಾನ್ ಅಹ್ಮದಖಾನ್ ಪಟ್ಹಾನ್ (ಪಕ್ಷೇತರ) — 62
ಮಲ್ಲಿಕಾರ್ಜುನ ಚನ್ನಪ್ಪ ಗಂಗಾಧರ (ಪಕ್ಷೇತರ) — 55
ತಳವಾರ ಶಿವಕುಮಾರ (ಪಕ್ಷೇತರ) — 42
ಜಿಶಾನ್ ಡಿ. ಶಿರಸಂಗಿ (ಪಕ್ಷೇತರ) — 39
ಬಸವರಾಜ ಶಂಕರಪ್ಪ ಕೊಟಗಿ (ಪಕ್ಷೇತರ) — 39

10,245 ಮತಗಳು ತಿರಸ್ಕೃತ
ಒಟ್ಟು 73,691 ಮತಗಳಲ್ಲಿ 63,446 ಮತಗಳು ಮಾನ್ಯವಾಗಿದ್ದು, 10,245 ಮತಗಳು ತಿರಸ್ಕೃತಗೊಂಡಿವೆ ಎಂದು ಚುನಾವಣಾಧಿಕಾರಿ ಕೆ.ಎಂ. ಜಾನಕಿ ತಿಳಿಸಿದ್ದಾರೆ.
ಸರಳ ಹಾಗೂ ಸಜ್ಜನ ರಾಜಕಾರಣಿಯಾಗಿರುವ ಪ್ರೋ ಎಸ್.ವಿ.ಸಂಕನೂರ ಅವರ ಗೆಲುವಿಗೆ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಅಭಿನಂದಿಸಿದ್ದಾರೆ.










