ಬೆಂಗಳೂರು: ಡಿಆರ್ಡಿಒ ಇಲಾಖೆಯ ಹಿರಿಯ ವಿಜ್ಞಾನಿ ಶರದ್ ಕಟಿಯಾರ್ (47) ಬೆಂಗಳೂರಿನ ಸೀಗೇಹಳ್ಳಿಯಲ್ಲಿ ಮೃತಪಟ್ಟಿದ್ದಾರೆ.
ಅಕ್ಟೋಬರ್ 21ರಂದು ಸಂಜೆ ಅಪಾರ್ಟ್ಮೆಂಟ್ನ ನಾಲ್ಕನೇ ಮಹಡಿಯಿಂದ ಬಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಎಡಿಎ ಸಂಸ್ಥೆಯ ಪ್ರೋಗ್ರಾಮಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶರದ್, ಕಳೆದ ಕೆಲವು ಸಮಯದಿಂದ ಮಾನಸಿಕ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಮಣಿಪಾಲ್ ಆಸ್ಪತ್ರೆ ಹಾಗೂ ನಿಮ್ಹಾನ್ಸ್ನಲ್ಲಿ ಚಿಕಿತ್ಸೆ ಪಡೆದಿದ್ದ ಅವರು, ಘಟನೆ ನಡೆದ ದಿನವೂ ನಿಮ್ಹಾನ್ಸ್ಗೆ ತೆರಳಿ ಬಂದಿದ್ದರು ಎಂದು ತಿಳಿದುಬಂದಿದೆ.
ಘಟನೆ ನಡೆದ ದಿನ ಶರದ್ ಅವರ ತಂದೆ ಮಗನ ಚಲನವಲನವನ್ನು ಗಮನಿಸುತ್ತಿದ್ದರು. ಈ ವೇಳೆ ಶರದ್ ಏಕಾಏಕಿ ಅಪಾರ್ಟ್ಮೆಂಟ್ನ ನಾಲ್ಕನೇ ಮಹಡಿಗೆ ತೆರಳಿದ್ದಾರೆ. ಅನುಮಾನಗೊಂಡ ತಂದೆ ಅವರನ್ನು ಹಿಂಬಾಲಿಸಿ ತಡೆಯಲು ಪ್ರಯತ್ನಿಸಿದ್ದಾರೆ. ಆದರೆ, ಮೆಟ್ಟಿಲುಗಳನ್ನು ಹತ್ತಲು ವಿಳಂಬವಾಗಿದ್ದು, ಅಷ್ಟರಲ್ಲೇ ಶರದ್ ಮೇಲಿನಿಂದ ಬಿದ್ದಿದ್ದರು ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದರೂ, ಅಷ್ಟರಲ್ಲೇ ಮೃತಪಟ್ಟಿದ್ದರು. ಘಟನೆಗೆ ಸಂಬಂಧಿಸಿದಂತೆ ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ಕೆ.ಆರ್.ಪುರಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.










